ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳು ಕೊರೊನಾದಿಂದಾಗಿ ಆರ್ಥಿಕ ನಷ್ಟ ಎದುರಿಸುತ್ತಿವೆ. ಹೀಗಾಗಿ ನಷ್ಟದಿಂದ ಹೊರ ಬರಲು ಕೆಎಸ್ಆರ್ಟಿಸಿ ಪ್ಲಾನ್ ಮಾಡಿದ್ದು, ಒಂದು ವರ್ಷ ಸಾರಿಗೆ ನೌಕರರಿಗೆ ರಜೆ ನೀಡಲು ಮುಂದಾಗಿದೆ.
ವೇತನ ಹಾಗೂ ಭತ್ಯೆ ರಹಿತ ರಜೆ ನೀಡಲು ಚಿಂತನೆ ನಡೆಸಿದ್ದು, ಈ ಸಂಬಂಧ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪತ್ರ ಬರೆದಿದ್ದಾರೆ. ವಾಯುವ್ಯ, ಈಶಾನ್ಯ, ಬಿಎಂಟಿಸಿ ಎಂಡಿಗಳಿಗೆ ರಜೆ ನೀಡುವ ಸಂಬಂಧ ಪತ್ರ ಬರೆದು, ತಮ್ಮ ಅಭಿಪ್ರಾಯ ತಿಳಿಸಲು ಸೂಚನೆ ನೀಡಿದ್ದಾರೆ.
ಕೊರೊನಾದಿಂದ ಪ್ರಯಾಣಿಕರ ಕೊರತೆ ಉಂಟಾಗಿದೆ. ಸಾರಿಗೆ ನಿಗಮಗಳಿಗೆ ಆರ್ಥಿಕವಾಗಿ ನಷ್ಟವಾಗಿದೆ. ನೌಕರರಿಗೆ ಸಂಬಳ ನೀಡಲು ಆಗುತ್ತಿಲ್ಲ. ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದಲೂ ರಜೆ ನೀಡುವುದು ಸೂಕ್ತ. ಸದ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಕಾರ್ಯಾಚರಣೆಯೂ ಇಲ್ಲ. ಹೀಗಾಗಿ ರಜೆ ನೀಡಿದರೆ ಸಂಸ್ಥೆಯ ಹಿತದೃಷ್ಟಿ, ನೌಕರರ ಆರೋಗ್ಯದ ಕಾಳಜಿ ದೃಷ್ಟಿಯಿಂದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಅಭಿಪ್ರಾಯ ಸಂಗ್ರಹಕ್ಕೆ ಪತ್ರ ಬರೆದಿದ್ದಾರೆ.
ಅಲ್ಲದೆ ನೌಕರರಿಗೆ ಹಲವು ಷರತ್ತು ವಿಧಿಸಿದ್ದು, ರಜಾ ಅವಧಿಯಲ್ಲಿ ಸಂಸ್ಥೆಯ ಹಿತಕ್ಕೆ ಧಕ್ಕೆ ತರುವಂತಹ ಕೆಲಸದಲ್ಲಿ ತೊಡಗಬಾರದು. ಯಾವುದೇ ಸಮಯದಲ್ಲಿ ರಾಜೀನಾಮೆ ಕೊಡಬಹುದು. ವಿಶೇಷ ರಜೆಯ ಅವಧಿ ಮುಗಿದ ಕೂಡಲೇ ಕೆಲಸಕ್ಕೆ ಹಾಜರಾಗಬೇಕು ಸೇರಿದಂತೆ ಅನೇಕ ಷರತ್ತುಗಳನ್ನು ಪ್ರಸ್ತಾಪಿಸಲಾಗಿದೆ.