ಬೆಂಗಳೂರು: ಈ ವರ್ಷದಿಂದ ಸರ್ಕಾರದ ವಿವಿಧ ಇಲಾಖಾ ಸಮವಸ್ತ್ರ ಖರೀದಿಗೆ ಟೆಂಡರ್ ಕರೆಯಲಿದ್ದೇವೆ. ಈ ವರ್ಷದಿಂದ ನಮ್ಮ ನೇಕಾರರ ಬಟ್ಟೆಯನ್ನೇ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ್ ವಿಧಾನಪರಿಷತ್ ಕಲಾಪದಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಮೂರು ಕೋಟಿಗೂ ಹೆಚ್ಚು ಮೀಟರ್ ಬಟ್ಟೆಯ ಅವಶ್ಯಕತೆ ಇದೆ. ಇಲ್ಲಿಯ ನೇಕಾರರಿಗೆ ಒಳ್ಳೆಯದಾಗಬೇಕಾದರೆ ಟೆಂಡರ್ ಕರೆದು ಹೊರರಾಜ್ಯದಿಂದ ತರಿಸುವ ಬದಲು ನಮ್ಮ ನೇಕಾರರಿಗೆ ಅವಕಾಶ ಕೊಡಬೇಕು ಎಂದು ಸದಸ್ಯೆ ಭಾರತಿ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಶ್ರೀಮಂತ ಪಾಟೀಲ್, ಈ ಬೇಡಿಕೆ ಸ್ವಾಗತಾರ್ಹ. ಜವಳಿ ಉದ್ಯಮ ಸಂಕಷ್ಟದಲ್ಲಿದೆ. ಕೊರೊನಾದಿಂದ ನೇಕಾರರ ಉದ್ಯಮ ಹಾಳಾಗಿದೆ. ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ನೀಡಬೇಕಿದೆ. ನಮ್ಮ ರಾಜ್ಯದಲ್ಲಿ ವಿದ್ಯಾವಿಕಾಸ ಯೋಜನೆಯಡಿ 70 ಲಕ್ಷ ಮೀಟರ್ ಬಟ್ಟೆ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಈಗ ಸಿಎಂ ಜೊತೆ ಚರ್ಚೆ ನಡೆಸಿ ಬೇರೆ ಬೇರೆ ಇಲಾಖೆಗೆ ಸಮವಸ್ತ್ರ ಪೂರೈಕೆ ಮಾಡುವರು ನಮ್ಮ ಜವಳಿ ಉದ್ಯಮದಿಂದ ಖರೀದಿಸಿ ಸಮವಸ್ತ್ರ ಕೊಡಬೇಕು ಎನ್ನುವ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪಾಕಿಸ್ತಾನದಂತಹ ಮನಸ್ಥಿತಿ ಭಾರತದಲ್ಲಿ ಇದ್ದಿದ್ದರೆ ಭಗವಾನ್ ಉಳಿಯುತ್ತಿರಲಿಲ್ಲ: ಸಿ.ಟಿ.ರವಿ
ರಾಜ್ಯದಲ್ಲಿ ಯಾವ ರೀತಿ ಸಮವಸ್ತ್ರ ಕೊಡುತ್ತಿದ್ದಾರೆ ಎಂದು ನೋಡಲು ಜವಳಿ ಆಯುಕ್ತರು ತಮಿಳುನಾಡಿಗೆ ಹೋಗಿದ್ದಾರೆ. ಅಲ್ಲಿಂದ ಬಂದು ವರದಿ ಕೊಡಲಿದ್ದಾರೆ. ಗುಜರಾತ್ ಇತ್ಯಾದಿ ಕಡೆಯಲ್ಲಿಯೂ ನೋಡಿ ಪರಿಶೀಲನೆ ಮಾಡಿ ನಂತರ ನಮ್ಮಲ್ಲಿಯೂ ಬಟ್ಟೆಯನ್ನು ನಮ್ಮ ನಿಗಮಗಳಿಂದಲೇ ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಬೇರೆ ರಾಜ್ಯದ ಬಟ್ಟೆಯನ್ನು ಇಲ್ಲಿ ಪೂರೈಕೆ ಮಾಡುವ ವ್ಯವಸ್ಥೆಯನ್ನು ಸ್ಥಗಿತ ಮಾಡಲಿದ್ದೇವೆ. ಈ ವರ್ಷದಿಂದ ನಮ್ಮ ನೇಕಾರರ ಬಟ್ಟೆಯನ್ನೇ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.
ಇದಕ್ಕೆ ದನಿಗೂಡಿಸಿದ ಸಚಿವೆ ಶಶಿಕಲಾ ಜೊಲ್ಲೆ, ಅಂಗನಾಡಿಗೆ 2.5 ಲಕ್ಷ ಸೀರೆ ಅಗತ್ಯವಿದ್ದು, ನೇಕಾರರಿಂದಲೇ ಖರೀದಿ ಮಾಡಲಿದ್ದೇವೆ. ಇದನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಪರಿಗಣನೆ ಮಾಡಿದ್ದು, ಫಲಿತಾಂಶ ನೋಡಿ ಎಲ್ಲ ಕಡೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.
ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಇದಕ್ಕೆ ಟೆಂಡರ್ ಕರೆಯುವುದಲ್ಲ. ನಮ್ಮ ಇಲಾಖೆಯಿಂದ ಖರೀದಿಸಬೇಕು ಎಂದು ಮನವಿ ಮಾಡಿದರು ಇದಕ್ಕೆ ಸಚಿವರು ಸಮ್ಮತಿ ನೀಡಿದರು.