ಬೆಂಗಳೂರು: ಕೇಂದ್ರದ 'ಡಬಲ್ ಇಂಜಿನ್' ಸರ್ಕಾರ ರಾಜ್ಯದ ನೆರೆಹಾನಿಗೆ ಸ್ಪಂದಿಸಿಲ್ಲ, ರಾಜ್ಯದ ಸಂಸದರು ಕೇಂದ್ರದ ಬಳಿ ಹಣ ಕೇಳುವ ಧೈರ್ಯ ಮಾಡುತ್ತಿಲ್ಲ. ರಾಜ್ಯದಿಂದ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ಕಷ್ಟಕಾಲದಲ್ಲಿ ರಾಜ್ಯಕ್ಕೆ ನೆರವಾಗಿಲ್ಲ. ರಾಜ್ಯ ಸರ್ಕಾರಕ್ಕೆ ಸರಿಯಾಗಿ ನೆರೆಹಾನಿ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 68ರ ಅಡಿ ನೆರೆಹಾನಿ ಕುರಿತ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೇಂದ್ರದಲ್ಲಿ ಮಂತ್ರಿಮಂಡಲ ಕಾಣುತ್ತಿಲ್ಲ, ಬರೀ ಪ್ರಧಾನಿ, ಗೃಹ ಸಚಿವರು ಮಾತ್ರ ಕಾಣುತ್ತಾರೆ, ಉಳಿದ ಸಚಿವರು ಯಾರೂ ಕಾಣಲ್ಲ, ಒಂದು ರೀತಿಯಲ್ಲಿ ಇದು ಸರ್ವಾಧಿಕಾರಿ ಸರ್ಕಾರವಾಗಿದೆ. ಈ ಡಬಲ್ ಇಂಜಿನ್ ಸರ್ಕಾರದಲ್ಲಿ ಉಳಿದ ಸಚಿವರು ಏನು ಮಾಡಿದರು ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಕರ್ನಾಟಕದಿಂದ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಷ್ಟ ಕಾಲದಲ್ಲಿಯೂ ರಾಜ್ಯಕ್ಕೆ ನೆರವಿನ ಅಭಯ ನೀಡಲಿಲ್ಲ, 25 ಸಂಸದರಿದ್ದಾರೆ. ಆದರೂ ಅವರು ಕೇಂದ್ರಕ್ಕೆ ವಿಶೇಷ ಪರಿಹಾರ ನೀಡುವಂತೆ ಒತ್ತಾಯಿಸಲಿಲ್ಲ. ಅನುದಾನ ಕೇಳುವ ಶಕ್ತಿ ಸಾಮರ್ಥ್ಯ ಬಿಜೆಪಿಯಿಂದ ಆಯ್ಕೆಯಾಗಿರುವ 25 ಸಂಸದರಿಗೆ ಇಲ್ಲವಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ: 40% ಬರಹವುಳ್ಳ ಮಾಸ್ಕ್ ಧರಿಸಿ ಬಂದ ಕಾಂಗ್ರೆಸ್ ಸದಸ್ಯರು: ಪರಿಷತ್ನಲ್ಲಿ ಗದ್ದಲ
ಫಸಲ್ ಭೀಮಾ ವಿಮಾಯಡಿ ಹಣ ತುಂಬಿಸಿಕೊಂಡವರು ಇಂದು ವಿಶ್ವದ ಎರಡು, ಮೂರನೇ ಸಿರಿವಂತರಾಗಿದ್ದಾರೆ. ಆದರೆ, ಟಾಟಾ ಬಿರ್ಲಾದವರು ಶತ ಶತಮಾನದಿಂದ ಇದ್ದರೂ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೇಲೆಯೇ ಬರುತ್ತಿಲ್ಲ. ಫಸಲ್ ಭೀಮಾ ವಿಮಾ ಹಣ ಕಟ್ಟಿಸಿಕೊಳ್ಳುವ ಕಂಪನಿಯವರು ಕೇವಲ 10 ವರ್ಷದಲ್ಲೇ ವಿಶ್ವದ ಎರಡು ಮೂರನೇ ಶ್ರೀಮಂತರಾಗುತ್ತಿದ್ದಾರೆ. ಇದು ಹೇಗೆ? ಎಂದು ಅದಾನಿ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಸರ್ಕಾರದ ವಿರುದ್ಧ ಬೆರಳು ಮಾಡಿದ್ದಕ್ಕೆ ಮಧ್ಯಪ್ರವೇಶ ಮಾಡಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪರಿಹಾರ ಕೇಳಿ ಕೊಡೋಣ, ಸಮಸ್ಯೆ ಹೇಳಿ ಪರಿಹರಿಸೋಣ ಆದರೆ ಮಳೆ ಅನಾಹುತಕ್ಕೆ, ಬಿರುಗಾಳಿ ಬೀಸಿದ್ದಕ್ಕೆ ಬಿಜೆಪಿ ಕಾರಣ ಎನ್ನುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಕಂದಾಯ ದಾಖಲೆಗಳ ಡಿಜಿಟಲೀಕರಣ, ಮೂರು ವರ್ಷದಲ್ಲಿ ಡ್ರೋಣ್ ಸರ್ವೇ: ಕಂದಾಯ ಸಚಿವ ಅಶೋಕ್
ಸಿಲಿಕಾನ್ ಸಿಟಿ ಗಾರ್ಬೇಜ್ ಸಿಟಿಯಾಗಿದೆ, ಮುಂದೆ ಡ್ರಗ್ಸ್ ಸಿಟಿಯಾಗಲಿದೆ: ನಂತರ ಮಾತು ಮುಂದುವರೆಸಿದ ಮರಿತಿಬ್ಬೇಗೌಡ, ಹಿಂದಿನ ಸರ್ಕಾರದಲ್ಲಿ ಸಿಲಿಕಾನ್ ಸಿಟಿಯಾಗಿದ್ದ ಬೆಂಗಳೂರು ನಿಮ್ಮ ಸರ್ಕಾರದಲ್ಲಿ ಗಾರ್ಬೇಜ್ ಸಿಟಿಯಾಗಿದೆ. ಮುಂದೆ ಡ್ರಗ್ಸ್ ಸಿಟಿಯಾಗಲಿದೆ, ಮುಂದೆ ಯಾವ ದಾಖಲೆ ಸಿಗದ ಸಿಟಿಯಾಗಲಿದೆ. ರಾಜಕಾಲುವೆ ಒತ್ತುವರಿಗೆ ಯಾರು ಕಾರಣ?, ಕಾಲುವೆ ಜಾಗದಲ್ಲಿ ಮನೆ ಕಟ್ಟಿದ್ದಾರೆ ಎಂದರೆ ಬಿಬಿಎಂಪಿ ಇಂಜಿನಿಯರ್ ಏನು ಮಾಡುತ್ತಿದ್ದಾರೆ?. ಅವರಿಗೆ ದಾಖಲೆ ಮಾಡಿಕೊಟ್ಟಿದ್ದು ಹೇಗೆ?, ಇಂಜಿನಿಯರ್ ವಿರುದ್ಧ ಏನು ಕ್ರಮ?, ಒತ್ತುವರಿ ಕುರಿತು ಪಕ್ಷಿನೋಟ ಬಿಡುಗಡೆ ಮಾಡಿ, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ, ಅವರನ್ನು ಹೊಣೆ ಮಾಡಿ, ಒತ್ತುವರಿಯಂತಹ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾಯ್ದೆ ಮಾಡಿ ಎಂದರು.
ಬಡವರನ್ನು ಈ ಸರ್ಕಾರ ಜೆಸಿಬಿಯಲ್ಲಿ ಎತ್ತಿ ಹಾಕುತ್ತಿದೆ. ಆದರೆ, ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲ್ಲ, ಬಿಬಿಎಂಪಿ ಚುನಾವಣೆ ನಡೆಸಿಲ್ಲ, ಜನಪ್ರತಿನಿಧಿಗಳಿಲ್ಲ, ಜನರ ಕಷ್ಟ ಯಾರು ನೋಡಬೇಕು. ಅಧಿಕಾರಿಗಳು ಜನರ ಬಳಿ ಹೋಗುತ್ತಿಲ್ಲ,ಇವರಿಂದ ರಸ್ತೆ ಗುಂಡಿ ಮುಚ್ಚಲಾಗಲಿಲ್ಲ, ಹೈಕೋರ್ಟ್ ಸೂಚಿಸಿ ರಸ್ತೆಗುಂಡಿ ಮುಚ್ಚಿಸಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಉಪನಗರ ರೈಲ್ವೆ ಯೋಜನೆಗೆ ಅನಂತ್ ಕುಮಾರ್ ಹೆಸರು, ಸಿಎಂ ಜೊತೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು : ಸಚಿವ ಸೋಮಣ್ಣ
ದೇವಾಲಯ, ಪ್ರತಿಮೆ, ಮಠಕ್ಕೆ ಅನುದಾನ ನೀಡಬೇಡಿ: ದೇವಾಲಯ ಕಟ್ಟಲು, ಪ್ರತಿಮೆ ಕಟ್ಟಲು, ಮಠಗಳಿಗೆ, ಜಾತಿ ಸಂಘ ಸಂಸ್ಥೆಗಳಿಗೆ ಸಾವಿರಾರು ಕೋಟಿ ಅನುದಾನ ಕೊಡಲಾಗಿದೆ. ಈ ರೀತಿ ಕೊಡುವುದನ್ನು ನಿಲ್ಲಿಸಬೇಕು. ಜನರ ತೆರಿಗೆ ಹಣ ಕಡಲೆಪುರಿ ರೀತಿ ಹಂಚದೆ ಇಂತಹ ಸಂಕಷ್ಟದ ಸಮಯದಲ್ಲಿ ಬಡವರಿಗೆ ಕೊಡಬೇಕು. ಸಂತ್ರಸ್ತರಿಗೆ, ಬಡವರಿಗೆ ಆರ್ಥಿಕ ನೆರವು ನೀಡದಿದ್ದಲ್ಲಿ ಬಡ ಜನರ ಕಣ್ಣೀರು ಒರೆಸಲು ಸಾಧ್ಯವಿಲ್ಲ. ಮಠಗಳು ನಡೆಸುವ ಶಾಲೆಗಳಿಗೆ ಅನುದಾನ ಕೊಡಿ. ಆದರೆ ಮಠಕ್ಕೆ ಬೇಡ. ಈ ರೀತಿ ಮಠ, ಪ್ರತಿಮೆ, ಜಾತಿ ಸಂಸ್ಥೆಗಳಿಗೆ ತೆರಿಗೆ ಹಣ ನೀಡುವುದು ಅಕ್ಷಮ್ಯ, ಸಂವಿಧಾನ ವಿರೋಧಿಯಾಗಿದೆ. ಜಾತಿ ಸಂಘ ಸಂಸ್ಥೆಗಳಿಗೆ ಹಣ ನೀಡಿದರೆ ಮುಂದಿನ ಚುನಾವಣೆಯಲ್ಲಿ ನೀವು ಗೆಲ್ಲುತ್ತೀರ ಎಂದುಕೊಳ್ಳಬೇಡಿ. ಜನ ಹಿಂದೆ ಎಷ್ಟೋ ಸಲ ಪಲ್ಟಿಹೊಡೆಸಿದ್ದಾರೆ ಎಂದು ಎಚ್ಚರಿಕೆ ನೀಡಿದರು.