ಬೆಂಗಳೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜ್ಯ ಬಿಜೆಪಿ ಕೈಗೆತ್ತಿಕೊಂಡಿರುವ 104 ವಿಧಾನ ಸಭಾ ಕ್ಷೇತ್ರಗಳ ಪ್ರವಾಸದಲ್ಲಿ ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಮಾಡುವ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರ ಬೇಡಿಕೆಗೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ತಂಡದ ನೇತೃತ್ವ ವಹಿಸಿಕೊಂಡು ರಾಜ್ಯ ಪ್ರವಾಸ ಮಾಡಲು ಸೂಚನೆ ನೀಡಲಾಗಿದ್ದು, ಅಲ್ಲದೇ ಕಟೀಲ್ ತಂಡದ ಪ್ರವಾಸದಲ್ಲಿಯೂ ಸೇರಿಕೊಳ್ಳಲು ತಿಳಿಸಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಂದಿನಿಂದಲೇ ರಾಜ್ಯ ಪ್ರವಾಸ ಮಾಡುವ ಘೋಷಣೆ ಮಾಡುತ್ತಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಪದೇ ಪದೇ ನಿರಾಸೆಯನ್ನೇ ಕರುಣಿಸಿದೆ. ಮೂರು ತಂಡಗಳಲ್ಲಿ ರಾಜ್ಯ ಪ್ರವಾಸಕ್ಕೆ ಸಿದ್ದತೆ ನಡೆಸಿದ್ದ ಬಿಜೆಪಿ ಎರಡು ತಂಡಕ್ಕೆ ಪ್ರವಾಸವನ್ನು ಸೀಮಿತಗೊಳಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಂದು ತಂಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಂದು ತಂಡದಲ್ಲಿ ರಾಜ್ಯ ಪ್ರವಾಸ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಗಿತ್ತು. ಯಡಿಯೂರಪ್ಪಗೆ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗಳಲ್ಲಿ ಸ್ಥಾನ ಕಲ್ಪಿಸುತ್ತಿದ್ದಂತೆ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೂ ಮತ್ತೊಂದು ತಂಡ ಪ್ರವಾಸ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಯಿತು.
ಆದರೆ ಬಿಜೆಪಿ ಹೈಕಮಾಂಡ್ ಸರ್ಕಾರ ಮತ್ತು ಪಕ್ಷ ಪ್ರತಿನಿಧಿಸುವಂತೆ ಕೇವಲ ಎರಡು ತಂಡಗಳು ಮಾತ್ರ ಪ್ರವಾಸ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ಮೂರು ತಂಡಗಳು ಮತ್ತೆ ಎರಡು ತಂಡಕ್ಕೆ ಸೀಮಿತವಾಗುವಂತಾಯಿತು.
ಯಡಿಯೂರಪ್ಪ ಪ್ರತ್ಯೇಕವಾಗಿ ರಾಜ್ಯ ಪ್ರವಾಸಕ್ಕೆ ತೆರಳುವ ಕುರಿತು ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಹೈಕಮಾಂಡ್ ಇದಕ್ಕೆ ಅವಕಾಶ ನೀಡಿಲ್ಲ.ಬದಲಾಗಿ ಕಟೀಲ್ ನೇತೃತ್ವದ ತಂಡ ಮತ್ತು ಬೊಮ್ಮಾಯಿ ನೇತೃತ್ವದ ತಂಡಗಳು ಮಾತ್ರ ಪ್ರವಾಸ ಮಾಡಲಿ. ನೀವು ಬೊಮ್ಮಾಯಿ ನೇತೃತ್ವದ ತಂಡದ ನೇತೃತ್ವ ವಹಿಸಿಕೊಂಡು ಮಾರ್ಗದರ್ಶನ ನೀಡಿ ಎಂದು ಸೂಚನೆ ನೀಡಿದೆ.
ಕೇವಲ ಬೊಮ್ಮಾಯಿ ತಂಡದಲ್ಲಿ ಮಾತ್ರ ಪ್ರವಾಸಕ್ಕೆ ಹೋಗುವ ನಿರ್ಬಂಧವಿಲ್ಲ, ಕಟೀಲ್ ತಂಡದ ಪ್ರವಾಸದ ಕ್ಷೇತ್ರಗಳಲ್ಲಿಯೂ ನೀವು ಭಾಗಿಯಾಗಬಹುದು. ನಿಮ್ಮ ಅವಶ್ಯಕತೆ ಯಾವ ಯಾವ ಕ್ಷೇತ್ರಗಳಿಗೆ ಅತ್ಯಗತ್ಯವಾಗಿ ಬೇಕಾಗಿದೆಯೇ ಅಲ್ಲಿ ನೀವು ಹೋಗಿ ಪ್ರಚಾರ ಮಾಡಿ ಎಂದು ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದೆ.
ಮತ್ತೆ ಯಡಿಯೂರಪ್ಪ ಕೈ ಕಟ್ಟಿ ಹಾಕಿದ ಹೈಕಮಾಂಡ್: ರಾಜ್ಯ ಪ್ರವಾಸದ ವಿಚಾರದಲ್ಲಿ ಪದೇ ಪದೇ ಯಡಿಯೂರಪ್ಪಗೆ ಹಿನ್ನಡೆಯಾಗುತ್ತಲೇ ಇದೆ. ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಿದ್ದಂತೆ ರಾಜ್ಯ ಪ್ರವಾಸದ ಘೋಷಣೆ ಮಾಡಿ ಟೊಂಕ ಕಟ್ಟಿ ನಿಂತ ಯಡಿಯೂರಪ್ಪಗೆ ಹೈಕಮಾಂಡ್ ಲಗಾಮು ಹಾಕಿ ಪಕ್ಷದ ವತಿಯಿಂದ ಮಾತ್ರ ಪ್ರವಾಸ ಎನ್ನುವ ಸಂದೇಶ ರವಾನಿಸಿ ಯಡಿಯೂರಪ್ಪ ಅವರ ಕೈ ಕಟ್ಟಿಹಾಕಿದೆ.
ನಂತರ ಯಡಿಯೂರಪ್ಪ ತಟಸ್ಥರಾಗಿ ಉಳಿದ ಹಿನ್ನಲೆಯಲ್ಲಿ ನಂತರ ನಡೆದ ಎಲ್ಲ ಉಪ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ್ದು ಬಿಜೆಪಿಗೆ ಎಚ್ಚರಿಕೆ ಗಂಟೆಯಾಯಿತು. ಹಾಗಾಗಿಯೇ ಯಡಿಯೂರಪ್ಪ ಅವರನ್ನು ಸಕ್ರಿಯರನ್ನಾಗಿಸಿಕೊಳ್ಳಲು ನಿರ್ಧರಿಸಿದ ಬಿಜೆಪಿ ಹೈಕಮಾಂಡ್ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡಿತು.
ಪಕ್ಷದ ಉನ್ನತ ಮಟ್ಟದ ಸಮಿತಿಯಲ್ಲಿ ಅವಕಾಶ ಸಿಕ್ಕಿದ್ದರಿಂದ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯ ಪ್ರವಾಸಕ್ಕೆ ಅಣಿಯಾಗಿದರು. ಎರಡು ತಂಡಗಳ ಪ್ರವಾಸವನ್ನು ಮೂರು ತಂಡಕ್ಕೆ ಹೆಚ್ಚಿಸಿದರು. ಇದಕ್ಕೆ ಹೈಕಮಾಂಡ್ ಒಪ್ಪಿಗೆ ಪಡೆದುಕೊಳ್ಳಲು ಯಡಿಯೂರಪ್ಪ ಯತ್ನಿಸಿದರೂ,ಅದಕ್ಕೆ ಹೈಕಮಾಂಡ್ ಅಸಮ್ಮತಿ ತೋರಿದೆ. ಪ್ರತ್ಯೇಕ ತಂಡದ ಬದಲು ಎರಡೂ ತಂಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎನ್ನುವ ಸಂದೇಶ ನೀಡಿದೆ. ಹಾಗಾಗಿ ಯಡಿಯೂರಪ್ಪ ಪ್ರತ್ಯೇಕ ತಂಡದಲ್ಲಿ ಪ್ರವಾಸಕ್ಕೆ ಹೋಗಬೇಕೆನ್ನುವ ಆಸೆಗೆ ಹೈಕಮಾಂಡ್ ತಣ್ಣೀರೆರಚಿದೆ.
ಬಿಎಸ್ವೈ ಬಳಸಿಕೊಳ್ಳಿ : ಯಡಿಯೂರಪ್ಪ ಅವರು ಯಾವ ಯಾವ ಕ್ಷೇತ್ರಗಳಲ್ಲಿ ಪ್ರವಾಸಕ್ಕೆ ಹೋಗಬೇಕು ಎನ್ನುವ ನಿರ್ಧಾರವನ್ನು ನಿರ್ಧರಿಸುವಂತೆ ಹೈಕಮಾಂಡ್ ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ. ಯಡಿಯೂರಪ್ಪ ಹೋದಲ್ಲಿ ಮಾತ್ರ ಪಕ್ಷ ಗೆಲ್ಲಲಿದೆ ಎನ್ನುವ ಸ್ಥಿತಿ ಹಲವು ಕ್ಷೇತ್ರದಲ್ಲಿದ್ದು, ಅಲ್ಲಿ ಯಾವ ಕಾರಣಕ್ಕೂ ಯಡಿಯೂರಪ್ಪ ಅವರಿಲ್ಲದೆ ಹೋಗಬೇಡಿ. ತಂಡ ಯಾವುದೇ ಇದ್ದರೂ ಸೂಕ್ಷ್ಮ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರನ್ನು ಕರೆದೊಯ್ಯಿರಿ ಎನ್ನುವ ಫರ್ಮಾನು ಹೊರಡಿಸಿದೆ. ಇದರ ಜೊತೆಗೆ ಪಕ್ಷ ಸಂಘಟನೆ ವೇಳೆ ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ಪಡೆದುಕೊಳ್ಳಬೇಕು ಎನ್ನುವ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಖಚಿತಪಡಿಸಿದ್ದಾರೆ. ಸಿಎಂ ತಂಡದಲ್ಲೇ ಯಡಿಯೂರಪ್ಪ ಇರಲಿದ್ದು, ಇಡೀ ಪ್ರವಾಸದುದ್ದಕ್ಕೂ ಸಕ್ರಿಯರಾಗಿ ಭಾಗಿಯಾಗಲಿದ್ದಾರೆ. ಪ್ರವಾಸದ ವೇಳೆ ನಡೆಯಲಿರುವ ಸಭೆಗಳು, ಸಮಾವೇಶಗಳಲ್ಲಿಯೂ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ಬಿಜೆಪಿ ಶಾಸಕ ದಡೇಸಗೂರು ವಿರುದ್ಧ ತನಿಖೆ ಸುಳಿವು ನೀಡಿದ ಸಿಎಂ