ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ನೇರ ತೆರಿಗೆಗಳು ಮತ್ತು ಪರೋಕ್ಷ ತೆರಿಗೆಗಳ ಅಂಶಗಳಲ್ಲಿ ತಿದ್ದುಪಡಿಗಳನ್ನು ಮಾಡುವಂತೆ ಕೋರಿ ಬಿಲ್ಡರ್ಸ್ ಕ್ರೆಡೈ ಬೆಂಗಳೂರು ರಿಯಲ್ ಎಸ್ಟೇಟ್ ಸಂಸ್ಥೆಯ ಬೆಂಗಳೂರು ಅಧ್ಯಾಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಭಾರತದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿರುವ ಸಂಸ್ಥೆ, ಕ್ರೆಡೈ ತಡೆರಹಿತ ವ್ಯಾಪಾರ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲು ಬಯಸುತ್ತದೆ. ತೆರಿಗೆ ಅಂಶಗಳಲ್ಲಿ ತಿದ್ದುಪಡಿ ಮಾಡಿದ್ದಲ್ಲಿ ಆ ಕ್ರಮಗಳು ನಮ್ಮ ದೇಶ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ನಮ್ಮ ಭಾಗವಹಿಸುವಿಕೆಯನ್ನು ಬಲಪಡಿಸಲಿದೆ. ಕರ್ನಾಟಕ ಮತ್ತು ನಮ್ಮ ದೇಶದ ಬೆಳವಣಿಗೆಗೆ ಅರ್ಥಪೂರ್ಣ ಕೊಡುಗೆ ನೀಡಲು ನಮಗೆ ಅನುವು ಮಾಡಿಕೊಡುತ್ತದೆ. ಭಾರತವನ್ನು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆರ್ಥಿಕ ದೇಶವನ್ನಾಗಿ ಮಾಡುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸಲಿದೆ ಎಂದು ಕ್ರೆಡೈ ಬೆಂಗಳೂರಿನ ಅಧ್ಯಕ್ಷ ಭಾಸ್ಕರ್ ಟಿ ನಾಗೇಂದ್ರಪ್ಪ ಮನವಿ ಮಾಡಿದ್ದಾರೆ.
ಪ್ಯಾನ್-ಇಂಡಿಯಾ ಆಧಾರದ ಮೇಲೆ ರಿಯಲ್ ಎಸ್ಟೇಟ್ ಅಭಿವೃದ್ಧಿಯು ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುತ್ತದೆ. ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಲಕ್ಷಾಂತರ ಜನರನ್ನು ನೇಮಿಸಿಕೊಂಡಿದೆ. ಈ ಕ್ಷೇತ್ರವು ದೇಶಾದ್ಯಂತ ಕೌಶಲ್ಯ ಮತ್ತು ಕೌಶಲ್ಯರಹಿತ ಉದ್ಯೋಗಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಹೀಗಾಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರದ ಚೈತನ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಕ್ರೆಡೈ ಬೆಂಗಳೂರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮನವಿ: ನೇರ ತೆರಿಗೆ ವಿಭಾಗದಲ್ಲಿ ಕೈಗೆಟುಕುವ ದರದಲ್ಲಿ ವಸತಿ-ವಿಭಾಗ 80ಐಬಿಎ ನಲ್ಲಿ ತಿದ್ದುಪಡಿಗಳು, ಮನೆ ಖರೀದಿದಾರರಿಗೆ ಬಡ್ಡಿಯಲ್ಲಿ ಕಡಿತ- ಮಿತಿಯಲ್ಲಿ ಹೆಚ್ಚಳ, ಬಾಡಿಗೆ ವಸತಿಗಳನ್ನು ಉತ್ತೇಜಿಸಲು ಹೊಸ ನಿಬಂದನೆ, ರಿಯಲ್ ಎಸ್ಟೇಟ್ನಿಂದ ದೀರ್ಘಾವಧಿಯ ಬಂಡವಾಳ ಲಾಭಗಳು, ಸೆಕ್ಷನ್ 23(5) ದಾಸ್ತಾನು ಹೊಂದಿರುವ ಆಸ್ತಿಯ ಕಾಲ್ಪನಿಕ ಬಾಡಿಗೆಗೆ ಪಾವತಿಸಿದ ತೆರಿಗೆ, ಪ್ರಾಥಮಿಕ ಮಾರಾಟ ವಹಿವಾಟುಗಳಿಗಾಗಿ ವಿಭಾಗ 43 CA ಅನ್ನು ತೆಗೆದುಹಾಕುವುದು.
ಮನೆ ಆಸ್ತಿ ವಿಭಾಗದಲ್ಲಿ ನಷ್ಟದ ಕಡಿತ, ಮನೆ ಖರೀದಿದಾರರಿಗೆ ಹೆಚ್ಚುತ್ತಿರುವ ಬಡ್ಡಿಯ ಕಡಿತಕ್ಕಾಗಿ ವಿಭಾಗ 24 (B) ನಲ್ಲಿ ಬದಲಾವಣೆಗಳು, ಆರ್ಇಐಟಿಗಳಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ ಸಡಿಲಿಕೆ, ಗೃಹ ಸಾಲದ ಅಸಲು ಮರುಪಾವತಿ ಮಿತಿಯನ್ನು ಹೆಚ್ಚಿಸಲು ವಿಭಾಗ 80C ಗೆ ತಿದ್ದುಪಡಿ ಅಥವಾ ಪರ್ಯಾಯವಾಗಿ ಪ್ರಧಾನ ಮರುಪಾವತಿಗೆ ಸಂಬಂಧಿಸಿದಂತೆ ಕಡಿತಕ್ಕಾಗಿ ಮತ್ತೊಂದು ವಿಭಾಗವನ್ನು ಪರಿಚಯಿಸುವುದು.
ಸ್ಥಗಿತಗೊಂಡಿರುವ ಯೋಜನೆಗಳಿಗೆ ಬಲ ನೀಡಲು, ವಿಲೀನಗಳು ಮತ್ತು ಸ್ವಾಧೀನದ ನಿಬಂಧನೆಗಳನ್ನು ಉತ್ತೇಜಿಸಲು ಸೆಕ್ಷನ್ 72ಎ ನಲ್ಲಿ ತಿದ್ದುಪಡಿ, ಜಂಟಿ ಅಭಿವೃದ್ಧಿ ಒಪ್ಪಂದಗಳಿಗೆ ಸಂಬಂಧಿಸಿದ ನಿಬಂದನೆಗಳು, ವಿದೇಶಿ ಹೂಡಿಕೆದಾರರಿಂದ ಹಣ, ಎಸ್ಇಜೆಡ್ ಘಟಕಗಳು ಮತ್ತು ಡೆವಲಪರ್‌ಗಳಿಗೆ ತೆರಿಗೆಯಿಂದ ಮುಕ್ತಿ, ವಿದೇಶಿ ಹೂಡಿಕೆಯನ್ನು ಉತ್ತೇಜಿಸುವ ಕ್ರಮಗಳಲ್ಲಿ ತಿದ್ದುಪಡಿಗಾಗಿ ಸಲಹೆಗಳು ಹಾಗೂ ಮನವಿಯನ್ನು ಸಲ್ಲಿಸಿದೆ.
ಪರೋಕ್ಷ ತೆರಿಗೆಗಳ ವಿಭಾಗದಲ್ಲಿ ನಿರ್ಮಾಣ ಸೇವೆಗಳಿಗೆ ತೆರಿಗೆ ದರದ ಆಯ್ಕೆಗಳು, ಡೆವಲಪರ್ ಒದಗಿಸಿದ ನಿರ್ಮಾಣ ಸೇವೆಗಳಿಗಾಗಿ ಭೂ ಮಾಲೀಕರಿಂದ ತೆರಿಗೆ ಪಾವತಿ - ನೇರವಾಗಿ ಸೂಕ್ತ ಸರ್ಕಾರಕ್ಕೆ, ಅಡಮಾನದ(ಮಾರ್ಟ್ ಗೇಜ್ಡ್) ಫ್ಲಾಟ್‌ಗಳ ಸ್ಪಷ್ಟೀಕರಣ - ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ಡೆವಲಪರ್‌ನಿಂದ ತೆರಿಗೆ ಪಾವತಿ, ನೋಟಿಫಿಕೇಶನ್ ಸಂಖ್ಯೆ 12/2017 - ಪ್ಲಾಟ್ ಪ್ರಾಜೆಕ್ಟ್‌ಗಳಿಗಾಗಿ ಸಿಟಿ (ಆರ್) ನ ಪ್ರವೇಶ 41ಎ ಯ ಅನ್ವಯದ ಕುರಿತು ಸ್ಪಷ್ಟೀಕರಣ, ವಾಣಿಜ್ಯ ಯೋಜನೆಗಳ ಟಿಡಿಆರ್ ಮೇಲಿನ ತೆರಿಗೆ ಪಾವತಿಯ ಬಾಧ್ಯತೆಯ ಬಗ್ಗೆ ಸ್ಪಷ್ಟೀಕರಣ, ಸಾಮಾನ್ಯ ಟಿಡಿಆರ್‌ಗಳ (ಭೂಮಿ ಟಿಡಿಆರ್‌ಗಳು) ಮೇಲಿನ ತೆರಿಗೆಯ ಅನ್ವಯದ ಕುರಿತು ಸ್ಪಷ್ಟೀಕರಣಕ್ಕಾಗಿ ಮನವಿ ಸಲ್ಲಿಸಿದೆ.
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವುದರಿಂದ ಹಣಕಾಸು ಸಚಿವರು ಈ ತಿದ್ದುಪಡಿಗಳನ್ನು ಮಾಡುತ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ಭಾಸ್ಕರ್ ಟಿ ನಾಗೇಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ಸಮೀಕ್ಷೆ ವರದಿ ಮಂಡನೆ: ಶೇ 6.5 ಜಿಡಿಪಿ ಬೆಳವಣಿಗೆ ಅಂದಾಜು