ಬೆಂಗಳೂರು: ಯುಜಿಸಿ ಮಾರ್ಗಸೂಚಿ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಆಂತರಿಕ ಮೌಲ್ಯಮಾಪನ ನಡೆಸಬೇಕೆಂದು ಯುಜಿಸಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ. ಹಾಗೆಯೇ ಉಳಿದ ಸೆಮಿಸ್ಟರ್ಗಳ ಪರೀಕ್ಷೆಗಳನ್ನು ರದ್ದುಮಾಡಿ, ಆಂತರಿಕ ಮೌಲ್ಯ ಮಾಪನ ಅಥವಾ ಹಿಂದಿನ ಸೆಮಿಸ್ಟರ್ ಆಧಾರದ ಮೇಲೆ ಮೌಲ್ಯಮಾಪನ ನಡೆಸುವಂತೆ ಸಲಹೆ ನೀಡಿದೆ.
ಆದರೆ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮುಂದಿನ ವಾರದಿಂದ ಪರೀಕ್ಷೆ ನಿಗದಿ ಮಾಡಲಾಗಿದೆ. ಹೀಗಾಗಿ, ಎಲ್ಲೆಡೆ ವಿದ್ಯಾರ್ಥಿ ಸಂಘಟನೆಯೊಂದಿಗೆ ಡಿಪ್ಲೊಮಾ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಿನ ಕೆಆರ್ ಸರ್ಕಲ್ ಬಳಿ ಇರುವ ತಾಂತ್ರಿಕ ಶಿಕ್ಷಣ ಇಲಾಖೆಗೆ ಮುತ್ತಿಗೆ ಹಾಕಿ ಸೆಮಿಸ್ಟರ್ ಪರೀಕ್ಷೆ ರದ್ದುಪಡಿಸುವಂತೆ ನೂರಾರು ವಿದ್ಯಾರ್ಥಿಗಳು ಆಗ್ರಹಿಸಿದರು.
ಡಿಪ್ಲೊಮಾ 1,3 ಹಾಗು 5ನೇ ಸೆಮಿಸ್ಟರ್ ಪರೀಕ್ಷೆಯನ್ನ ಯುಜಿಸಿ ನಿಯಮದಂತೆ ರದ್ದುಗೊಳಿಸಬೇಕು. ಕೇವಲ ಅಂತಿಮ ವರ್ಷದ 2, 4 ಹಾಗು 6ನೇ ಸೆಮಿಸ್ಟರ್ ಪರೀಕ್ಷೆ ಮಾತ್ರ ನಡೆಸುವಂತೆ ಮನವಿ ಮಾಡಿದ್ದಾರೆ. ಕಳೆದ 15 ದಿನಗಳಿಂದ ಮನವಿ ಮಾಡಿದರೂ ಸ್ಪಂದಿಸದ ಕಾರಣಕ್ಕೆ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ. ಎರಡೆರಡು ಸೆಮಿಸ್ಟರ್ ಪರೀಕ್ಷೆಗಳನ್ನು ಏಕ ಕಾಲದಲ್ಲಿ ಬರೆಯಲು ಅಸಾಧ್ಯ. ಹಾಗಾಗಿ ಆ.9 ರಿಂದ 1,3,5 ನೇ ಸೆಮಿಸ್ಟರ್ ಪರೀಕ್ಷೆ ಆರಂಭವಾಗಲಿದ್ದು ಕೂಡಲೇ ರದ್ದುಗೊಳಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.