ಬೆಂಗಳೂರು: ಪಂಚಮಸಾಲಿ ಸಮುದಾಯದ ಹೋರಾಟದ ದಿಕ್ಕು ತಪ್ಪಿಸಲು ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರ ಸಭೆ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದು, ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಪಂಚಮಸಾಲಿ ಸಮುದಾಯದ ಬೇಡಿಕೆಗೆ ನಮ್ಮ ಸಹಮತವಿದೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಸುಜ್ಞಾನ ಮಂಟಪದಲ್ಲಿ ಮಾತನಾಡಿದ ಅವರು, ಈ ಹಿಂದೆ, ಈಗ, ಮುಂದೆಯೂ ವೀರಶೈವ ಲಿಂಗಾಯತ ಮಠಾಧೀಶರು ಪಂಚಮಸಾಲಿ ಪರ ಇರಲಿದ್ದೇವೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ನಿಲುವೇ ನಮ್ಮ ನಿಲುವೂ ಆಗಿದೆ. ಒಬಿಸಿ ಪಟ್ಟಿಗೆ ನಮ್ಮ ಸಮುದಾಯವನ್ನು ಸೇರಿಸುವ ಹೋರಾಟದ ದಾರಿ ತಪ್ಪಿಸಲು ಹೀಗೆ ಅಪಪ್ರಚಾರ ಮಾಡುತ್ತಾರೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ನಾವು ನೀವು ಎಲ್ಲಾ ಒಂದು, ಬೇರೆ ಅಲ್ಲ ಎಂದರು.
ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ಹೋರಾಟ ಅಲ್ಲ, ಹಕ್ಕೊತ್ತಾಯ. ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ. ಪಂಚಮಸಾಲಿ ಸಮುದಾಯದ ಸ್ವಾಮೀಜಿ ಜೊತೆಗೆ ಮಾತಾಡಿದ್ದೇವೆ. ಇಂದಿನದ್ದು ದಿಕ್ಕು ತಪ್ಪಿಸುವ ಕಾರ್ಯಕ್ರಮ ಅಲ್ಲ. ಒಟ್ಟಿಗೆ ಹೋಗುವ ಕಾರ್ಯಕ್ರಮ. ನಾವು ಒಟ್ಟಿಗೆ ಹೋಗುತ್ತಿದ್ದೇವೆ, ನಾವು ಅವರ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇವೆ. ಪರಮಪೂಜ್ಯರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.