ಬೆಂಗಳೂರು: ಕೋವಿಡ್-19 ನಿಯಂತ್ರಣದಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕರ್ನಾಟಕದ ದಾರಿ ತಪ್ಪುವಂತೆ ಮಾಡಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಜ್ಞರ ಸಮಿತಿ ಮೇ ತಿಂಗಳಲ್ಲೇ ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡದೆ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದೆ. ಆಡಳಿತದಲ್ಲಿ ಕೂಡ ಗೊಂದಲವಿದೆ. ದಿವಸಕ್ಕೆ ಒಬ್ಬ ಸಚಿವರ ಉಸ್ತುವಾರಿ ಬದಲಾವಣೆ ಮಾಡಿ, ಇವತ್ತು ವೈಫಲ್ಯ ಎದ್ದು ಕಾಣುತ್ತಿದೆ ಎಂದು ಟೀಕಿಸಿದ್ದಾರೆ.
ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದು, ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಒಂದೆಡೆ ದೇಶ ಕೊರೊನಾ ವಿಚಾರದಲ್ಲಿ ವಿಶ್ವದಲ್ಲಿ ದಿನಕ್ಕೊಂದು ಸ್ಥಾನ ಮೇಲೇರುತ್ತಿದ್ದರೆ, ರಾಜ್ಯ ಕೂಡ ಉಳಿದ ರಾಜ್ಯಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಸಮಸ್ಯೆ ಕೈಮೀರಿ ಹೋಗುತ್ತಿದ್ದರೂ, ನಾವು ಕೊರೊನಾ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದೇವೆ ಎಂಬ ಹೇಳಿಕೆಯನ್ನು ಸಚಿವರು ನೀಡುತ್ತಿದ್ದಾರೆ. ಈ ಎಲ್ಲಾ ವಿಚಾರವನ್ನು ಕಾಂಗ್ರೆಸ್ ನಾಯಕರು ಲೇವಡಿ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಬರೆದುಕೊಂಡಿದ್ದಾರೆ.