ಬೆಂಗಳೂರು: ಗಾಂಧಿ ಜಯಂತಿಯನ್ನ ವಿಭಿನ್ನವಾಗಿ ಆಚರಿಸಲು ಕೆಪಿಸಿಸಿ ಚಿಂತನೆ ನಡೆಸಿದ್ದು, ಈ ಸಂಬಂಧ ಮಹತ್ವದ ಸಭೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಗುರುವಾರ ಸಂಜೆ ಸಭೆ ನಡೆದಿದ್ದು ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಮಹಾತ್ಮ ಗಾಂಧಿ ತತ್ವ ಸಿದ್ಧಾಂತವನ್ನು ಅನುಸರಿಸುವ ನಾಯಕರುಗಳು ಪಾಲ್ಗೊಂಡಿದ್ದರು.
ರಾಜ್ಯದ ಎಲ್ಲಾ ಕಡೆ ಪಾದಯಾತ್ರೆ ಮೂಲಕ ಗಾಂಧಿಜಯಂತಿಯನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದ್ದು ಈ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಯಿತು. ಅಲ್ಲದೆ ಕಾರ್ಯಕ್ರಮ ಯಶಸ್ಸಿಗೆ ಅಗತ್ಯ ಮಾರ್ಗಸೂಚಿ ಅನುಸರಿಸಲು ಸಲಹೆ ನೀಡಲಾಯಿತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆದಿದ್ದು ಇದರಲ್ಲಿ ಶಾಸಕ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯಾ ರೆಡ್ಡಿ, ಬೆಂಗಳೂರು ಮೂರು ಜಿಲ್ಲಾ ಘಟಕಗಳ ಅಧ್ಯಕ್ಷರು, ವಾರ್ಡ್ ಮಟ್ಟದ ಅಧ್ಯಕ್ಷರು,ಮುಖಂಡರು ಭಾಗಿಯಾಗಿದ್ದರು.
ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಸಭೆಯ ಬಳಿಕ ಯಶವಂತಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿ ಆಯ್ಕೆಗೆ ಸ್ಥಳೀಯ ನಾಯಕರ ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿ ಚರ್ಚಿಸಿದರು. ಒಮ್ಮತದ ಅಭ್ಯರ್ಥಿ ಆಯ್ಕೆ ಮೂಲಕ ಹಾಲಿ ಅನರ್ಹ ಶಾಸಕರ ಎಸ್. ಟಿ. ಸೋಮಶೇಖರ್ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಉಪಚುನಾವಣೆ ಯಲ್ಲಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಸಂಬಂಧ ಚರ್ಚೆ ನಡೆಸಿ, ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತೆ ಸೂಚನೆ ನೀಡಲಾಯಿತು.
ಈ ಎರಡು ಸಭೆಗಳಿಗೂ ಮುನ್ನ ಬೆಳಗ್ಗೆ ದಿನೇಶ್ ಗುಂಡೂರಾವ್ ವರ್ತೂರು ಭಾಗದ ಕಾಂಗ್ರೆಸ್ ಮುಖಂಡರ ಸಭೆಯನ್ನು ನಡೆಸಿದ್ದರು. ಮಾರತ್ಹಳ್ಳಿಯ ನಂದಿನಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ನಾಯಕರು ಪಾಲ್ಗೊಂಡು ಮಹತ್ವದ ಮಾಹಿತಿಗಳನ್ನು ನೀಡಿದರು.