ಬೆಂಗಳೂರು: ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಮುಂದೂಡಿದ್ದು, ನಮ್ಮ ವಕೀಲರು ವಾದ ಮಂಡಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದಲ್ಲಿ ಸುಪ್ರೀಂ ಕೋರ್ಟ್ನಿಂದ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಲಾಗಿರುವ ವಿಚಾರವಾಗಿ ಮಾತನಾಡಿದ ಅವರು, ನಾವು ಕೇವಿಯೆಟ್ ಸಲ್ಲಿಸಿದ್ದೆವು. ಹೀಗಾಗಿ ನಮ್ಮ ವಕೀಲರು ಸ್ಪಷ್ಟ ವಾದ ಮಾಡಲಿದ್ದಾರೆ. ಅನರ್ಹರು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಇದರ ಬಗ್ಗೆ ವಕೀಲರು ವಾದ ಮುಂದಿಡಲಿದ್ದಾರೆ. ಕಾಯ್ದೆಯ ನಿಯಮ ಅನುಷ್ಠಾನವಾಗಬೇಕು ಎಂದರು.
ಉತ್ತಮ ಉದ್ದೇಶದಿಂದ ರಾಜೀವ್ ಗಾಂಧಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರು. ಈ ಕಾಯ್ದೆಯನ್ನ ಸ್ಪೀಕರ್ ಎತ್ತಿಹಿಡಿದಿದ್ದಾರೆ. ಜನ ಕೂಡ ಸ್ಪೀಕರ್ ಆದೇಶವನ್ನೇ ಬಯಸಿದ್ದರು. ಹೀಗಾಗಿ ಕೋರ್ಟ್ ಸ್ಪೀಕರ್ ಆದೇಶವನ್ನ ಎತ್ತಿಹಿಡಿಯಲಿದೆ ಎಂಬ ವಿಶ್ವಾಸವಿದೆ. ಚುನಾವಣೆ ಸ್ಪರ್ಧೆ ಬಗ್ಗೆ ಆಯೋಗ ಹೇಳಿರಬಹುದು. ಆದರೆ ಪ್ರಕರಣಕ್ಕೂ, ಆಯೋಗಕ್ಕೂ ಸಂಬಂಧವಿಲ್ಲ. ಆಯೋಗ ಮಧ್ಯಪ್ರವೇಶ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.
ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಮಾತನಾಡಿದ ಅವರು, ನಾವು ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇವತ್ತು ಈ ಸಂಬಂಧ ಸಭೆ ಕರೆದಿದ್ದೇವೆ. ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಅದಾದ ಬಳಿಕ ಅಭ್ಯರ್ಥಿ ಆಯ್ಕೆ ನಡೆಸುತ್ತೇವೆ ಎಂದರು.
ಬೆಳಗಾವಿಯಲ್ಲಿ ನಾಳೆ ಪ್ರತಿಭಟನೆ:
ಪ್ರವಾಹ ಸಂತ್ರಸ್ತರ ವಿಚಾರದಲ್ಲಿ ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾದ ಹ್ಯೂಸ್ಟನ್ ಕಾರ್ಯಕ್ರಮಕ್ಕೆ ಹೋಗ್ತಾರೆ. ಅಲ್ಲಿನ ಪ್ರವಾಹ ಸಂತ್ರಸ್ತರ ಬಗ್ಗೆ ಸಾಂತ್ವನ ಹೇಳುತ್ತಾರೆ. ಆದರೆ ನಮ್ಮ ರಾಜ್ಯದ ಪ್ರವಾಹ ಪೀಡಿತರ ಬಗ್ಗೆ ಮಾತನಾಡಿಲ್ಲ. ರಾಜ್ಯಕ್ಕೆ ಬರಲಿಲ್ಲ, ನೆರೆ ಪೀಡಿತರಿಗೆ ಸಾಂತ್ವನ ಹೇಳಲಿಲ್ಲ. ಪ್ರವಾಹವಾಗಿರುವ ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿ ಸಂಸದರೇ ಇದ್ದಾರೆ. ಸವದಿ, ಜೋಶಿ ಎಲ್ಲರೂ ಇದ್ದಾರೆ, ಅವರು ಏನು ಮಾಡುತ್ತಿದ್ದಾರೆ. ಜನರ ಪ್ರತಿನಿಧಿಯಾಗೋಕೆ ಅವರು ಲಾಯಕ್ ಇಲ್ಲ. ಬಿಜೆಪಿಯು ಜನ ವಿರೋಧಿ ನೀತಿ ಒಳಗೊಂಡಿದೆ. ಹೀಗಾಗಿಯೇ ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.