ಬೆಂಗಳೂರು: ಕೋವಿಡ್ನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಬಾಕಿ ಇರುವ ಕೊರೊನಾ ಪರಿಹಾರ ಧನ ಬಿಡುಗಡೆ ಮಾಡುವಂತೆ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರು ಗಾಂಧಿನಗರದ ತಮ್ಮ ಕಚೇರಿಯಲ್ಲಿ ಕೋವಿಡ್ ಸಂತ್ರಸ್ತರ ಜೊತೆ ಸಭೆ ನಡೆಸಿದರು.
ಸಬೆ ಬಳಿಕ ಮಾತನಾಡಿ, ಕೋವಿಡ್ ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರು ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ಸಂಧ್ಯಾ ಸುರಕ್ಷಾ ಯೋಜನೆ ಅಡಿ ರೂ.1 ಲಕ್ಷ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ ರೂಪಾಯಿ 50 ಸಾವಿರ ಪಾವತಿಸುವಂತೆ ಸರ್ಕಾರ ಆದೇಶಿಸಿದೆ. ಸರ್ಕಾರದ ಆದೇಶದ ಸಂಖ್ಯೆ : ಕಂ.ಇ.ಟಿ.ಎನ್.ಆರ್. 2021ರಂತೆ ಕಳೆದ ವರ್ಷ ಸೆ.28ರಂದು ಆದೇಶ ಹೊರಡಿಸಲಾಗಿದೆ. ಈ ಆದೇಶದಂತೆ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಚೆಕ್ ರೂಪದಲ್ಲಿ ಹಾಗೂ ನೇರ ಹಣ ವರ್ಗಾವಣೆ ಮೂಲಕ ಪರಿಹಾರ ನೀಡಲಾಗಿದೆ ಎಂದರು.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ದಿನಗಣನೆ: ಪ್ರಸಾದದ ಜೊತೆ ಸಿಗಲಿದೆ ಕೋವಿಡ್ ಬೂಸ್ಟರ್ ಡೋಸ್
ಆದರೆ ಎರಡನೇ ಹಂತದಲ್ಲಿ ನನ್ನ ಮತಕ್ಷೇತ್ರದ 98 ಜನ ಫಲಾನುಭವಿಗಳು ಪರಿಹಾರದ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಜೊತೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ದಾರೆ. ಸ್ವತಃ ನಾನೇ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ವಾರ್ಡ್‌ವಾರ್ ಸಭೆ ನಡೆಸಿ, ಪರಿಹಾರ ಧನ ಪಡೆಯಲು ಅರ್ಜಿ ನಮೂನೆ ಹಾಗೂ ದಾಖಲೆ ಸಲ್ಲಿಸಲು ನೆರವು ನೀಡಿದ್ದೇನೆ. 98 ಫಲಾನುಭವಿಗಳು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಈಗಾಗಲೇ ಹಲವು ತಿಂಗಳುಗಳೇ ಕಳೆದು ಹೋಗಿವೆ. ಆದರೂ ಇವರಿಗೆ ಪರಿಹಾರದ ಧನ ಬಿಡುಗಡೆಯಾಗಿಲ್ಲ ಎಂದು ಹೇಳಿದರು.
ಸರ್ಕಾರದ ಧೋರಣೆ ನೋಡಿದರೆ ಪರಿಹಾರ ನೀಡಲೂ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲವೆ ಎಂಬ ಅನುಮಾನ ಮೂಡುತ್ತಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬ ಬಡತನ ರೇಖೆಗಿಂತ ಕೆಳಗಿದ್ದು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಮೃತಪಟ್ಟ 98 ಕುಟುಂಬದ ಸದಸ್ಯರು ಪರಿಹಾರಕ್ಕಾಗಿ ಅಧಿಕಾರಿಗಳ ಬಳಿ ದುಂಬಾಲು ಬೀಳುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಪ್ರತಿನಿತ್ಯ ನನ್ನ. ಕಚೇರಿಗೂ ಆಗಮಿಸಿ ಪರಿಹಾರ ಕೊಡಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಅಮಿತಾಬ್ ಬಚ್ಚನ್ಗೆ ಕೋವಿಡ್ ಪಾಸಿಟಿವ್