ಬೆಂಗಳೂರು: ಮುಂದಿನ ತಿಂಗಳು ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಲಿರುವ ಸೀಟುಗಳು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಒಟ್ಟು 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತಾನು ಕಳೆದುಕೊಂಡ ಕ್ಷೇತ್ರಗಳು 12 ಇವೆ. ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮಹತ್ವದ ಹೊಣೆಗಾರಿಕೆ ದಿನೇಶ್ ಗುಂಡೂರಾವ್ ಅವರ ಮೇಲಿದ್ದು, ಅರ್ಧಕ್ಕಿಂತ ಕಡಿಮೆ ಸ್ಥಾನಗಳು ಬಂದಲ್ಲಿ ಅವರನ್ನು ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಹೆಚ್ಚಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಆದ ಹೀನಾಯ ಹಿನ್ನಡೆಯ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಕೆಳಗಿಳಿಯಬೇಕಿತ್ತು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀರಕ್ಷೆ ಇದ್ದ ಹಿನ್ನೆಲೆ ಬಚಾವಾಗಿದ್ದರು. ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಶ್ನಾತೀತ ನಾಯಕರಾಗಿ ಬಿಂಬಿಸಿಕೊಳ್ಳುತ್ತಿದ್ದು, ಹೇಗಾದರೂ ಇವರನ್ನು ಕಟ್ಟಿ ಹಾಕಬೇಕೆಂಬ ಯತ್ನವನ್ನು ಮೂಲ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎನ್ನವ ಮಾತುಗಳು ಕೇಳಿಬರುತ್ತಿವೆ.
ದಿನೇಶ್ ತಲೆದಂಡ?
ಮೊದಲ ಹೆಜ್ಜೆಯಾಗಿ ದಿನೇಶ್ ಗುಂಡೂರಾವ್ ತಲೆದಂಡಕ್ಕೆ ಯತ್ನ ನಡೆದಿದೆ. ದಿನೇಶ್ ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾಗಿದ್ದೇ ಸಿದ್ದರಾಮಯ್ಯ ಅವರ ಪ್ರಭಾವದಿಂದ ಎಂಬ ವಿಚಾರ ಎಲ್ಲರಿಗೂ ತಿಳಿದದ್ದೇ ಆಗಿದೆ. ಹೀಗಿರುವಾಗ, ಚುನಾವಣೆ ಹಿನ್ನಡೆಯಾದರೂ ಅದನ್ನೇ ಮುಖ್ಯವಾಗಿಟ್ಟುಕೊಂಡು ದಿನೇಶ್ ಮೂಲಕ ಸಿದ್ದರಾಮಯ್ಯರಿಗೆ ರಾಜಕೀಯ ತಿರುಗೇಟು ನೀಡಬಹುದು ಎಂಬುದು ಮೂಲ ಕಾಂಗ್ರೆಸ್ ನಾಯಕರ ಸದ್ಯದ ಆಲೋಚನೆಯಾಗಿದೆಯಂತೆ. ಒಬ್ಬೊಬ್ಬರಾಗಿ ಸಿದ್ದರಾಮಯ್ಯ ಆಪ್ತರನ್ನು ಮಟ್ಟ ಹಾಕುವ ಮೂಲಕ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವವನ್ನು ತಗ್ಗಿಸುವ ಪ್ರಯತ್ನವನ್ನು ಕೆಲ ಹಿರಿಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆ ಎಂಟಕ್ಕಿಂತ ಹೆಚ್ಚು ಸ್ಥಾನವನ್ನು ಗೆಲ್ಲಲು ಯೋಜನೆ ರೂಪಿಸಿಕೊಂಡಿದೆ. ಇದು ಬಹುತೇಕ ಕೈಗೂಡುವ ಸಾಧ್ಯತೆ ಇರುವ ಹಿನ್ನೆಲೆ ಕಾಂಗ್ರೆಸ್ಗೆ ನಿರೀಕ್ಷಿತ ಸ್ಥಾನಗಳು ಸಿಗುವುದು ಅಸಾಧ್ಯದ ಮಾತಾಗಿದೆ.
ಹೀಗಾಗಿ ಇದೇ ಅವಕಾಶವನ್ನು ಬಳಸಿಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ದಿನೇಶ್ ಗುಂಡೂರಾವ್ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅವರನ್ನು ಕರೆತಂದು ಕೂರಿಸುವ ಯತ್ನವನ್ನು ಮೂಲ ಕಾಂಗ್ರೆಸ್ಸಿಗರು ತೆರೆಮರೆಯಲ್ಲಿ ನಡೆಸಿದ್ದಾರೆ ಎನ್ನಲಾಗಿದೆ. ಇವರಿಗೆ ಜಾತಿ ಬಲ ಅನುಕೂಲವಾಗಲಿದೆ. ಇದರ ಜೊತೆ ಜೊತೆಗೆ ಇತ್ತೀಚಿನ ದಿನಗಳಲ್ಲಿ ತೆರೆಮರೆಗೆ ಸರಿದಿರುವ ಮೂಲ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ ಎಂಬ ಗುಮಾನಿ ಎದ್ದಿದೆ.
ಈಗಾಗಲೇ ರಾಜ್ಯ ಕಾಂಗ್ರೆಸ್ನಲ್ಲಿ ವಲಸೆ ಹಾಗೂ ಮೂಲ ಕಾಂಗ್ರೆಸ್ಸಿಗರ ಕಾದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪರ್ಯಾಯ ಶಕ್ತಿ ಕೇಂದ್ರಗಳ ರೀತಿಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಈ ನಿಟ್ಟಿನಲ್ಲಿ ಉಪ ಚುನಾವಣೆ ಫಲಿತಾಂಶವನ್ನು ತಮ್ಮ ಬಲವರ್ಧನೆಗೆ ಬಳಸಿಕೊಳ್ಳಲು ಮೂಲ ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ ಎನ್ನಲಅಗುತ್ತಿದೆ. ಇದರಲ್ಲಿ ಯಾವ ರೀತಿ ಯಶಸ್ಸು ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.