ಬೆಂಗಳೂರು: ರಾಜರಾಜೇಶ್ವರಿ ನಗರ ಚುನಾವಣೆಯ ಪ್ರಚಾರದಲ್ಲಿ ತಂದೆ-ತಾಯಿ ಹೆಸರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕೇಸರೆರಚಾಡಿಕೊಳ್ಳುತ್ತಿದ್ದು, ಈ ಮೂಲಕ ರಾಜ್ಯ ರಾಜಕೀಯ ಕೆಳಹಂತಕ್ಕೆ ಬಂದು ನಿಂತಿದೆ.
ಆರ್.ಆರ್ ನಗರದ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ದಿನೇಶ್ ಗುಂಡೂರಾವ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವೇಳೆ, ಮುನಿರತ್ನ ಈ ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ತಾಯಿ ಸಮಾನ ಎಂದು ಹೇಳಿಕೊಂಡು ತಿರುಗಾಡಿದ್ದರು. ಈಗ ತಾಯಿ ಸಮಾನವಾದ ಪಕ್ಷ ಬಿಟ್ಟು ಹೋದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಮುಖಂಡ ರಿಜ್ವಾನ್, ಮುನಿರತ್ನ ಪಕ್ಷಕ್ಕೆ ಮಾಡಿದ ದ್ರೋಹ ತಾಯಿಗೆ ಮಾಡಿದ ದ್ರೋಹವಿದ್ದಂತಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.
ರಿಜ್ವಾನ್‌ರಾಗಲಿ ಅಥವಾ ನಮ್ಮ ಪಕ್ಷದ ಯಾವುದೇ ಮುಖಂಡರಾಗಲಿ ಮುನಿರತ್ನರವ ತಾಯಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ ಮುನಿರತ್ನ ಇದನ್ನು ಅನುಕಂಪ ಗಿಟ್ಟಿಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾದರು. ಆಗ ನಾನು ಇದನ್ನು ನಾಟಕೀಯ ಎಂದು ಹೇಳಿದ್ದೇನೆ. ತಂದೆಯ ಹೆಸರೇಳಿಕೊಂಡು ನಾನು ರಾಜಕಾರಣ ಮಾಡುತ್ತಿದ್ದೇನೆ ಎಂಬ ಮುನಿರತ್ನರವರ ಮಾತಿನಲ್ಲಿ ಅರ್ಥವಿಲ್ಲ. ನಮ್ಮ ತಂದೆ ಗುಂಡೂರಾವ್ ನಿಧನರಾಗಿ 27 ವರ್ಷಗಳು ಕಳೆದು ಹೋಗಿವೆ. ನನ್ನ ತಂದೆಯ ನಿಧನದ ನಂತರವೇ ನಾನು ರಾಜಕೀಯ ಪ್ರವೇಶ ಮಾಡಿದ್ದು. ನನ್ನ ಇತಿಹಾಸ ಜನರ ಮುಂದಿದೆ. 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ವಿರುದ್ಧ ಟೀಕೆ ಮಾಡಲು ಮುನಿರತ್ನರವರಿಗೆ ಬೇರೆ ಯಾವುದೇ ವಿಷಯವಿಲ್ಲ. ಹಾಗಾಗಿ ಇಂತಹ ಅರ್ಥಹೀನ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗಿದೆ. ಬಹುಶಃ ಉಪಚುನಾವಣೆ ಮುಗಿದ ಬಳಿಕವೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಿದ್ದತೆ ಮಾಡಿಕೊಂಡಿದ್ದಾರೆ.
ಬಿಎಸ್‌ವೈ ಜೊತೆಗಿರುವ ಮುಖಂಡರೆ ಅವರನ್ನು ಇಳಿಸುವ ವ್ಯವಸ್ಥಿತ ಸಂಚು ಹಾಕಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಬಿಜೆಪಿ ಸರ್ಕಾರವನ್ನು ಬೀಳಿಸಿ ಹಿಂಬಾಗಿಲಿನಿಂದ ಸರ್ಕಾರ ರಚಿಸುವ ಯಾವ ಉದ್ದೇಶವೂ ಇಲ್ಲ. ನಾವು ಚುನಾವಣೆ ಮೇಲೆ ನಂಬಿಕೆ ಇಟ್ಟಿದ್ದೇವೆ. ಚುನಾವಣೆಯಲ್ಲಿ ಮತದಾರರ ಆಶಿರ್ವಾದ ಪಡೆದ ನಂತರವೇ ನಾವು ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ರವರಿಗೆ ಅಸಂಬದ್ಧ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರುವ ಚಪಲವಿದೆ. ಹಾಗಾಗಿ 'ಹುಲಿಯಾ' 'ಕಾಡು ಮನುಷ್ಯರು' ಎನ್ನುತ್ತಾ ತಿರುಗಾಡುತ್ತಿದ್ದಾರೆ. ಕಟೀಲ್ ಮತದಾರರ ಮುಂದೆ ನೈಜ ವಿಷಯಗಳನ್ಯಾಕೆ ಪ್ರಸ್ತಾಪ ಮಾಡುವುದಿಲ್ಲ.? ಯಡಿಯೂರಪ್ಪ ಸರ್ಕಾರದ ಸಾಧನೆ ಏನು? ಮೋದಿ ಸರ್ಕಾರದ ಸಾಧನೆ ಏನು? ಎಂಬುದನ್ನು ಪ್ರಸ್ತಾಪ ಮಾಡಲಿ. ಈಗಾಗಲೇ ಅನ್ನಭಾಗ್ಯ ಯೋಜನೆಯಲ್ಲಿ ಕೊಡುತ್ತಿದ್ದ ಅಕ್ಕಿಯನ್ನು ಬಿಎಸ್‌ವೈ ಸರ್ಕಾರ ಕಡಿತ ಮಾಡಿದೆ. ಜನರಿಗೆ ಪಿಂಚಣಿ ಸಿಗುತ್ತಿಲ್ಲ, ಇಂದಿರಾ ಕ್ಯಾಂಟೀನ್ ಮುಚ್ಚುವ ಯತ್ನ ನಡೆಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ, ಕೊರೊನಾ ಪರಿಹಾರದಲ್ಲೂ ವ್ಯಾಪಕ ಭ್ರಷ್ಟಾಚಾರವಾಗಿದೆ. ಪ್ರವಾಹ ಸಂತ್ರಸ್ತರಿಗೆ ಇನ್ನೂ ಪರಿಹಾರವನ್ನೇ ಕೊಟ್ಟಿಲ್ಲ. ಈ ಬಗ್ಗೆ ನಳೀನ್ ಕುಮಾರ್ ಕಟೀಲ್ ಯಾಕೆ ಮಾತಾಡುವುದಿಲ್ಲ.? ಕಟೀಲ್‌ರವರಿಗೂ ತಮ್ಮ ಸರ್ಕಾರದ ಸಾಧನೆ ಶೂನ್ಯ ಎಂಬ ಸತ್ಯ ಗೊತ್ತಿದೆ. ಹಾಗಾಗಿ ದಿಕ್ಕು ತಪ್ಪಿಸಲು ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.
ಸ್ವತಃ ಕಟೀಲ್‌ರವರಿಗೂ ಈ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಬಿಎಸ್‌ವೈ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮುಂದೆ ಬಿಟ್ಟು ಮಾತನಾಡಿಸುತ್ತಿರುವುದೇ ಕಟೀಲ್ ಎಂಬುದು ನನ್ನ ಅನುಮಾನ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಶಿರಾ ಕ್ಷೇತ್ರದ ಅಭ್ಯರ್ಥಿ ಜಯಚಂದ್ರ ಪರ ಜನರ ಒಲವಿದೆ. ಅವರು ಉತ್ತಮ ಕೆಲಸಗಾರ. ಜಯಚಂದ್ರ ಬೂಟಾಟಿಕೆ ಮಾಡಿಕೊಂಡಾಗಲಿ, ಜಾತಿ ಹೆಸರೇಳಿಕೊಂಡಾಗಲಿ, ಹಣದ ಆಮಿಷ ತೋರಿಸಿ ಹಾಗೂ ಹೆದರಿಸಿ ಬೆದರಿಸಿ ಮತ ಕೇಳುತ್ತಿಲ್ಲ. ಅವರು ಮಾಡಿದ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅವರ ಸಾಧನೆಯ ಬಗ್ಗೆ ಕ್ಷೇತ್ರದ ಮತದಾರರಿಗೆ ತಿಳಿದಿದೆ. 1978 ರಿಂದಲೂ ಕ್ಷೇತ್ರಕ್ಕೆ ನೀರಾವರಿ, ರಸ್ತೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಇನ್ನು ಶಿರಾ ಕ್ಷೇತ್ರದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ ,ಶಿರಾದಲ್ಲಿ ಬಿಜೆಪಿ ಹಣದ ಹೊಳೆಯನ್ನೆ ಹರಿಸುತ್ತಿದೆ. ಯಡಿಯೂರಪ್ಪರ ಮಗ ವಿಜಯೇಂದ್ರ ಲೂಟಿ ಹೊಡೆದ ದುಡ್ಡನ್ನು ಹಂಚುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ. 2 ಸಾವಿರದಿಂದ 2 ಲಕ್ಷದವರೆಗೂ ಹಣದ ಹಂಚಿಕೆ ಮಾಡುತ್ತಿದ್ದಾರೆ. ಬಿಜೆಪಿಗೆ ಚುನಾವಣೆ ಎಂಬುದು ವ್ಯಾಪಾರವಾಗಿದೆ. ಆಪರೇಷನ್ ಕಮಲ ಮಾಡಿದ್ದು ವ್ಯಾಪಾರ, ಸರ್ಕಾರ ರಚನೆ ಮಾಡಿದ್ದು ವ್ಯಾಪಾರ ಜೊತೆಗೆ ಈ ಚುನಾವಣೆಯೂ ಕೂಡ ವ್ಯಾಪಾರವಾಗಿದೆ. ಬಿಜೆಪಿಗೆ ಚುನಾವಣೆ ಎದುರಿಸುವ ಯಾವ ನೈತಿಕತೆಯಿದೆ. ವಿಜಯೇಂದ್ರ ಕೆ.ಆರ್.ಪೇಟೆಯಲ್ಲೂ ಹಣ ಹಂಚಿ ಅಕ್ರಮ ಎಸಗಿದ್ದರು. ಶಿರಾದಲ್ಲಿ ಆ ಪ್ರಯತ್ನ ನಡೆಯುವುದಿಲ್ಲ. ಶಿರಾ ಮತದಾರರು ಪ್ರಜ್ಞಾವಂತರಿದ್ದಾರೆ. ಇಲ್ಲಿ ಜಯಚಂದ್ರ ಮಾಡಿದ ಅಭಿವೃದ್ಧಿ ಕೆಲಸ ಅವರ ಕೈ ಹಿಡಿಯಲಿದೆ ಎಂದು ತಮ್ಮ ಅಭ್ಯರ್ಥಿಯ ಪರ ಬ್ಯಾಟ್ ಬೀಸಿದ್ದರು.