ಬೆಂಗಳೂರು: ನಮ್ಮ ದೇಶದಲ್ಲಿ ಸಾಕಷ್ಟು ಮಾನವ ಸಂಪನ್ಮೂಲವಿದೆ. ಆದರೆ ಡಿಗ್ನಿಟಿ ಆಫ್ ಲೇಬರ್ ಅನ್ನೋದು ನಮ್ಮ ದೇಶಕ್ಕೆ ಮಾರಕವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ತೋಟಗಾರಿಕಾ ಸಚಿವ ನಾರಾಯಣಗೌಡ ಜಿಕೆವಿಕೆ ಆವಿಷ್ಕರಿಸಿದ ನೂತನ ತಳಿಗಳು ಮತ್ತು ನೂತನ ಕೃಷಿ ತಾಂತ್ರಿಕತೆಯ ಪ್ರದರ್ಶನ ಸ್ಥಳಗಳಿಗೆ ಭೇಟಿ ನೀಡಿದರು. ಸಚಿವರಿಗೆ ಕೃಷಿ ವಿಜ್ಞಾನಿಗಳು ನೂತನ ತಳಿಗಳಾದ ನೆಲಗಡಲೆ, ಅಲಸಂದೆ, ಮೇವಿನ ಅಲಸಂದೆ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ವಿಜ್ಞಾನಿಗಳು ಕಂಡು ಹಿಡಿದಿರುವ ನೂತನ ತಳಿಗಳು ಮತ್ತು ಕೃಷಿ ತಾಂತ್ರಿಕತೆ ರೈತರಿಗೆ ಅನುಕೂಲವಾಗಲಿವೆ. ಈ ನೂತನ ತಳಿಗಳು ಮತ್ತು ಕೃಷಿ ತಾಂತ್ರಿಕತೆಗಳು ರೈತನ ಕೈ ಸೇರಲು ಪ್ರಚಾರದ ಅಗತ್ಯವಿದೆ. ಹಾಗೆಯೇ ಇಲ್ಲಿ ಬೆಳೆದಿರುವ ಔಷಧಿ ಸಸ್ಯಗಳ ಉಪಯೋಗ ಕೇಳಿದ್ರೆ ಮೆಡಿಕಲ್ ಶಾಪ್ಗೆ ಹೋಗುವ ಅಗತ್ಯವೇ ಇರುವುದಿಲ್ಲ. ರೈತರು ತಮ್ಮ ಹೊಲಗಳಲ್ಲಿ ಔಷಧಿ ಸಸ್ಯಗಳನ್ನು ಬೆಳೆಯುವ ಮೂಲಕ ಅವುಗಳ ಪ್ರಯೋಜನ ಪಡೆಯಬೇಕು. ನಮ್ಮ ದೇಶದಲ್ಲಿ ಸಾಕಷ್ಟು ಮಾನವ ಸಂಪನ್ಮೂಲವಿದೆ. ಆದರೆ ಡಿಗ್ನಿಟಿ ಆಫ್ ಲೇಬರ್ ಅನ್ನೋದು ನಮ್ಮ ದೇಶಕ್ಕೆ ಮಾರಕವಾಗಿದೆ. ನಾನು ಶ್ರೀಮಂತನ ಮಗ, ಪದವಿ ಪಡೆದವನೆಂದು ಕೃಷಿ ಮಾಡುವುದು ಅಗೌರವ ಎಂದು ಭಾವಿಸಬಾರದು ಎಂದು ಕಿವಿಮಾತು ಹೇಳಿದರು.
ಕೃಷಿ ಬಹಳ ಗೌರವಯುತ ಹುದ್ದೆ. ಇನ್ನೊಬ್ಬರ ಕೈ ಕೆಳಗೆ ನೌಕರಿ ಮಾಡುವುದಕ್ಕಿಂತ ತನ್ನ ಹೊಲದಲ್ಲಿ ತಾನು ದುಡಿದರೆ ಇನ್ನೊಬ್ಬರಿಗೆ ಅನ್ನ ಕೊಡುವುದರ ಜೊತೆಗೆ ತಾನೂ ಅನ್ನ ತಿನ್ನಬಹುದು. ವೈಜಾನಿಕ ವಿಧಾನಗಳ ಮೂಲಕ ಕೃಷಿ ಮಾಡುವುದು ಲಾಭದಾಯಕವಾಗಿದೆ. ಇದರಿಂದ ಕೃಷಿ ಕ್ಷೇತ್ರಕ್ಕೂ ಅನುಕೂಲಕರವಾಗಲಿದೆ ಎಂದರು.
ನಾಳೆಯಿಂದ ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ. ರೈತರ ಮನೆ ಬಾಗಿಲಿಗೆ ಸರ್ಕಾರ ಬರಲಿದೆ. ಸಚಿವರು ಪ್ರತಿಯೊಂದು ಜಿಲ್ಲೆಯ ಒಂದು ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ವಾಸ್ತವ್ಯ ಮಾಡಲಿದ್ದಾರೆ. ಈ ಸಮಯದಲ್ಲಿ ಗ್ರಾಮದ ಮಣ್ಣಿನ ಗುಣ, ಯಾವ ಬೆಳೆಗಳನ್ನು ಬೆಳೆಯುತ್ತಾರೆಂಬ ಮಾಹಿತಿ ಪಡೆಯಲಾಗುತ್ತದೆ. ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಯುವಕರು ಕೃಷಿಯಲ್ಲಿ ತೊಡಗುವಂತೆ ಪ್ರೇರಣೆ ತುಂಬುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ತೋಟಗಾರಿಕಾ ಸಚಿವ ನಾರಾಯಣಗೌಡ ಮಾತನಾಡಿ, ಲಾಕ್ಡೌನ್ ಸಮಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸಿದರು. ಈ ಸಮಯದಲ್ಲಿ ನಮ್ಮ ಸರ್ಕಾರ ರೈತರ ನೆರವಿಗೆ ಬಂದಿದೆ. ರೈತರ ಉತ್ಪನ್ನಗಳನ್ನ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಳಿಸಲಾಗಿದೆ. ಶೇಕಡಾ 1ರಷ್ಟಿದ್ದ ರಫ್ತು ಶೇಕಡಾ 5ರಷ್ಟು ಏರಿಕೆಯಾಗಿದೆ. ಇವತ್ತು ರೈತರು ಎಪಿಎಂಸಿ ಮಾರುಕಟ್ಟೆ ಒಂದನ್ನೇ ಅವಲಂಬಿಸದೆ ಗ್ರಾಹಕರ ಮನೆ ಬಾಗಿಲಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.