ಬೆಂಗಳೂರು: ಕೊರೊನಾದಿಂದಾಗಿ ಮನೆಯಲ್ಲೇ ಲಾಕ್ ಆಗಿದ್ದ ಭಕ್ತರಿಗೆ ಹೊರ ಜಗತ್ತು ತೆರೆದರೂ ದೇವಾಲಯಗಳ ಬಾಗಿಲು ಮಾತ್ರ ಇನ್ನೂ ತೆರೆದಿಲ್ಲ. ಭಕ್ತರ ಟೆಂಪಲ್ ರನ್ಗೆ ರೆಡ್ ಸಿಗ್ನಲ್ ನೀಡಿರುವ ಸರ್ಕಾರ, ದೇವಾಲಯಗಳಲ್ಲಿ ಡಿಜಿಟಲ್ ದರ್ಶನಕ್ಕೆ ವ್ಯವಸ್ಥೆ ಮಾಡಲು ಮುಂದಾಗಿದೆ.
ಕೊರೊನಾ ಹೊಡೆತಕ್ಕೆ ರಾಜ್ಯದಲ್ಲಿನ ದೇಗುಲಗಳು ಕಳೆದೆರಡು ತಿಂಗಳಿಂದ ಬಾಗಿಲು ಮುಚ್ಚಿವೆ. ದೇವಾಲಯಗಳಲ್ಲಿ ದೇವರ ದರ್ಶನ ಸಿಗದೆ ಭಕ್ತರು ಪರದಾಡುವಂತಾಗಿದ್ದು, ಇವರ ನೆರವಿಗೆ ಧಾವಿಸಲು ಸರ್ಕಾರ ಮುಂದಾಗಿದೆ.
ಮುಜರಾಯಿ ಇಲಾಖೆ ಮಾಸ್ಟರ್ ಪ್ಲಾನ್ :
ಕೊರೊನಾ ಭೀತಿ ಕಡಿಮೆಯಾಗುವವರೆಗೂ ಆನ್ಲೈನ್ನಲ್ಲಿ ದೇವರ ದರ್ಶನ ಮಾಡಿಸುವ ಹೊಸ ಪ್ರಯತ್ನಕ್ಕೆ ಮುಜರಾಯಿ ಇಲಾಖೆ ಮುಂದಾಗಿದ್ದು, ಭಕ್ತ ಸಮೂಹಕ್ಕೆ ಅಂಗೈನಲ್ಲೇ ಮೊಬೈಲ್ ಮೂಲಕ ದೇವರ ದರ್ಶನ ಮಾಡಿಸಲು ಮುಂದಾಗಿದೆ.
ಮಹಾಮಂಗಳಾರತಿ, ವಿಶೇಷ ಸೇವೆ ಎಲ್ಲವೂ ಡಿಜಿಟಲ್ ಸೇವೆಯನ್ನಾಗಿ ಮಾಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಆ್ಯಪ್ ಮತ್ತು ವೆಬ್ಸೈಟ್ ಅಭಿವೃದ್ಧಿಪಡಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಲಾಕ್ಡೌನ್ ಅವಧಿಯಲ್ಲಿ ದೇವರ ದರ್ಶನ ಮತ್ತು ಸೇವಾ ಕೈಂಕರ್ಯಗಳನ್ನು ಆನ್ಲೈನ್ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುತ್ತಿದೆ.
15 ಜಿಲ್ಲೆಗಳ ಎ ವರ್ಗದ ದೇವಾಲಯಗಳಲ್ಲಿ ನಡೆಯುವ ಎಲ್ಲಾ ಸೇವೆಗಳ ವಿವರ ಮತ್ತು ಆನ್ಲೈನ್ ಮೂಲಕ ದೇವರ ಪೂಜೆ ವೀಕ್ಷಣೆಗೆ ಅವಕಾಶ ಕಾಯ್ದಿರಿಸಲು ಆ್ಯಪ್ ಅಭಿವೃದ್ಧಿಪಡಿಸಿ ದೇವಸ್ಥಾನಗಳ ಪಟ್ಟಿ ತಯಾರಿಸಿಕೊಡುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಮುಜರಾಯಿ ಇಲಾಖೆ ಪತ್ರ ಬರೆದಿದೆ.
ದೇವಾಲಯಗಳ ಪಟ್ಟಿ ಬರುತ್ತಿದ್ದಂತೆ ಆನ್ಲೈನ್ ಮೂಲಕ ಭಕ್ತ ಸಮೂಹಕ್ಕೆ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಪ್ರಮುಖ ದೇವಾಲಯಗಳ ದೇವರ ದರ್ಶನ ಭಾಗ್ಯ ಭಕ್ತ ಸಮೂಹಕ್ಕೆ ಇನ್ಮುಂದೆ ಡಿಜಿಟಲ್ ಮೂಲಕ ಲಭ್ಯವಾಗಲಿದೆ. ಭಕ್ತರ ಟೆಂಪಲ್ ರನ್ ಆನ್ಲೈನ್ನಲ್ಲೇ ನಡೆಯಲಿದೆ.
ಭಕ್ತರು ಆನ್ಲೈನ್ನಲ್ಲಿ ಪೂಜೆ, ಸೇವೆ ಸಲ್ಲಿಸಲು ಅವಕಾಶ:
ಲಾಕ್ಡೌನ್ ಹಿನ್ನೆಲೆಯಲ್ಲಿ ಸಭೆ, ಸಮಾರಂಭ, ಸುದ್ದಿಗೋಷ್ಠಿಗಳು ಡಿಜಿಟಲೀಕರಣಗೊಂಡ ನಂತರ ಇದೀಗ ದೇವಸ್ಥಾನಗಳಲ್ಲಿನ ದೇವರ ಸೇವೆ, ಪೂಜಾ ಕೈಂಕರ್ಯ, ದರ್ಶನ ಭಾಗ್ಯವೂ ಡಿಜಿಟಲೀಕರಣಗೊಳ್ಳುತ್ತಿದೆ. ಭಕ್ತರು ಮತ್ತು ದೇವರ ನಡುವೆ ಪೂಜಾರಿ ಬದಲು ಇಂಟರ್ನೆಟ್ ಇರಲಿದೆ.