ಬೆಂಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 596 ಅಂಕ ಪಡೆದು ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಂಡಿದ್ದ ಕೋಲಾರದ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿ ಕೌಶಿಕ್ ಹಾಗೂ ಜಯನಗರ ಆರ್.ವಿ.ಕಾಲೇಜಿನ ಸುರಭಿ ಎಸ್ ಇದೀಗ ದ್ವಿತೀಯ ಸ್ಥಾನ ಪಡೆದಿದ್ದು, ಮರು ಮೌಲ್ಯಮಾಪನದಲ್ಲಿ ಮಲ್ಲೇಶ್ವರದ ವಿದ್ಯಾಮಂದಿರ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ 597 ಅಂಕ ಪಡೆದು ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವಿಜ್ಞಾನ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಟಾಪ್ 20 ರಲ್ಲೂ ಸ್ಥಾನ ಪಡೆಯದಿದ್ದ ಧಾತ್ರಿ ಎಸ್ ಅವರು ಮರುಮೌಲ್ಯಮಾಪನದ ನಂತರ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಮಲ್ಲೇಶ್ವರದ ವಿದ್ಯಾಮಂದಿರ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಇವರು ಮೊದಲ ಮೂರು ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ, ಟಾಪ್ 20 ಯಲ್ಲೂ ಅವರ ಹೆಸರಿರಲಿಲ್ಲ. ಹಾಗಾಗಿ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಮರುಮೌಲ್ಯಮಾಪನ ಕಾರ್ಯ ಮುಗಿದಿದ್ದು, ಒಟ್ಟು 600 ಕ್ಕೆ 597 ಅಂಕ ಪಡೆದಿರುವ ಇವರಿಗೆ ರಾಜ್ಯಕ್ಕೆ ಮೊದಲ ಸ್ಥಾನ ಸಿಕ್ಕಿದೆ.
ಅಶ್ವತ್ಥ್ ನಾರಾಯಣ್‌ರಿಂದ ಸನ್ಮಾನ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಮೊದಲನೇ ರ‍್ಯಾಂಕ್ ಪಡೆದಿರುವ ಧಾತ್ರಿ ಎಸ್. ಅವರನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ನಿನ್ನೆ ಸನ್ಮಾನಿಸಿದರು. ವಿದ್ಯಾರ್ಥಿನಿ ಮತ್ತು ಅವರ ಪೋಷಕರನ್ನು ಶಾಸಕರು ಅಭಿನಂದಿಸಿದರು. ಬಳಿಕ ಶಾಸಕರು ವಿದ್ಯಾರ್ಥಿನಿಯ ಮುಂದಿನ ವ್ಯಾಸಂಗಕ್ಕೆ ಶುಭ ಹಾರೈಸಿದರು. ಸರ್ವಾಂಗೀಣ ವಿಕಸನಕ್ಕೆ ಒತ್ತು ಕೊಡುವಂತೆ ಕಿವಿಮಾತು ಹೇಳಿದರು.
ಇದನ್ನೂ ಓದಿ : ಪಿಯು ಫಲಿತಾಂಶ: ವಿಜ್ಞಾನ ವಿಭಾಗದ ಯೋಗೀಶ್ ರಾಜ್ಯಕ್ಕೆ 3ನೇ ಟಾಪರ್..
ಮಾರ್ಚ್‌ನಲ್ಲಿ ನಡೆದಿದ್ದ ಪರೀಕ್ಷೆಗೆ ಹಾಜರಾದ 7,02,067 ವಿದ್ಯಾರ್ಥಿಗಳಲ್ಲಿ 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 74.67 ರಷ್ಟು ಫಲಿತಾಂಶ ಬಂದಿತ್ತು. ಕಲಾ ವಿಭಾಗದಲ್ಲಿ ಶೇ. 61.22. ವಾಣಿಜ್ಯ ವಿಭಾಗದಲ್ಲಿ ಶೇ. 75.89 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 85.71 ರಷ್ಟು ಫಲಿತಾಂಶ ಬಂದಿತ್ತು. 3,49,901 ಬಾಲಕರು ಪರೀಕ್ಷೆ ಬರೆದಿದ್ದು, ಇದರಲ್ಲಿ 2,41,607 ಬಾಲಕರು ತೇರ್ಗಡೆಯಾಗಿದ್ದರು. ಶೇ. 69.05 ರಷ್ಟು ಬಾಲಕರು ತೇರ್ಗಡೆಯಾಗಿದ್ದರು. 3,52,166 ಬಾಲಕಿಯರು ಪರೀಕ್ಷೆ ಬರೆದಿದ್ದು, 2,82,602 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರು. ಶೇ. 80.25 ರಷ್ಟು ಫಲಿತಾಂಶ ಬಂದಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರು.
ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೌಶಿಕ್ ಮನದ ಮಾತು
ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಎನ್ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿ ಬಿ.ತಬಸುಂ ಶೇಖ್ 593 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಕೆ.ಎ. 600 ಕ್ಕೆ 600 ಅಂಕ ಪಡೆದುಕೊಂಡು ಮೊದಲ ಸ್ಥಾನ ಪಡೆದುಕೊಂಡಿದ್ದರೆ. ವಿಜ್ಞಾನ ವಿಭಾಗದಲ್ಲಿ ಕೋಲಾರದ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿ ಕೌಶಿಕ್ 600 ಕ್ಕೆ 596 ಅಂಕ ಪಡೆದಿದ್ದು, ಜಯನಗರ ಆರ್.ವಿ.ಕಾಲೇಜಿನ ಸುರಭಿ ಎಸ್ 596 ಅಂಕ ಪಡೆದು ಜಂಟಿ ಮೊದಲ ಸ್ಥಾನ ಪಡೆದುಕೊಂಡಿದ್ದರು.
ಇದನ್ನೂ ಓದಿ : ಪಿಯುಸಿ ಪರೀಕ್ಷೆ: ವಾಣಿಜ್ಯ ವಿಭಾಗದಲ್ಲಿ ಇವರೇ ನೋಡಿ ಟಾಪರ್ಸ್!