ಬೆಂಗಳೂರು : 2022-23ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡುತ್ತಾ 14,762 ಕೋಟಿ ರೂ. ಪೂರಕ ಅಂದಾಜಿಗೆ ಒಪ್ಪಿಗೆ ನೀಡಬೇಕು ಎಂದು ಕೋರಿದರು. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮತಕ್ಕೆ ಹಾಕಿದಾಗ ಧ್ವನಿಮತ ಮೂಲಕ ಒಪ್ಪಿಗೆ ದೊರೆಯಿತು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾಗಿರುವ ಕಾರಣ ರಾಜಸ್ವ ಲೆಕ್ಕದಲ್ಲಿ 988 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 97 ಕೋಟಿ ರೂ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 478 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 101 ಕೋಟಿ, ಅರ್ಥಿಕ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 362, ಬಂಡವಾಳ ಲೆಕ್ಕದಲ್ಲಿ ಒಂದು ಕೋಟಿ ರೂ., ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 14,48, ಬಂಡವಾಳ ಲೆಕ್ಕದಲ್ಲಿ 3.97 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ.
ಎಲ್ಲ ಇಲಾಖೆಗಳಿಗೆ ಹಣ ಹಂಚಿಕೆ: ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 2673 ಕೋಟಿ, ಬಂಡವಾಳ ಲೆಕ್ಕದಲ್ಲಿ 1228 ಕೋಟಿ ರೂ., ಮೂಲಸೌಕರ್ಯ ಅಭಿವೃದ್ಧಿಗೆ 73 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1112 ಕೋಟಿ ರೂ. ಹಾಗೂ ಬಂಡವಾಳ ಲೆಕ್ಕದಲ್ಲಿ 1821 ಕೋಟಿ ರೂ., ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ರಾಜಸ್ವ ಲೆಕ್ಕದಲ್ಲಿ 120,98, ಸಹಕಾರಕ್ಕೆ ರಾಜಸ್ವ ಲೆಕ್ಕದಲ್ಲಿ 1.52 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 88,38 ಕೋಟಿ ರೂ., ಸಮಾಜ ಕಲ್ಯಾಣಕ್ಕೆ ರಾಜಸ್ಥ ಲೆಕ್ಕದಲ್ಲಿ 1145 ಕೋಟಿ, ಬಂಡವಾಳ ಲೆಕ್ಕದಲ್ಲಿ 79 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ರಾಜಸ್ವ ಲೆಕ್ಕದಲ್ಲಿ 843 ಕೋಟೆ, ಬಂಡವಾಳ ಲೆಕ್ಕದಲ್ಲಿ 21.33 ಕೋಟಿ ರೂ.ಗಳ ಬೇಡಿಕೆ ಮಂಡಿಸಲಾಗಿದೆ.
ವಸತಿಗೆ ರಾಜಸ್ವ ಲೆಕ್ಕದದಲ್ಲಿ ಹಣ ಮಂಜೂರು: ವಾರ್ತಾ, ಪ್ರವಾಸೋದ್ಯಮ ಮತ್ತು ಯುವ ಜನ ಸೇವೆಗಳಿಗೆ ರಾಜಸ್ವ ಲೆಕ್ಕದಲ್ಲಿ 43.92 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 10.42 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜಿಗೆ ರಾಜಸ್ವ ಲೆಕ್ಕದಲ್ಲಿ 1.16 ಕೋಟಿ, ಕಂದಾಯಕ್ಕೆ ರಾಜಸ್ವ ಲೆಕ್ಕದಲ್ಲಿ 836, ಬಂಡವಾಳ ಲೆಕ್ಕದಲ್ಲಿ 20 ಕೋಟಿ ರೂ., ವಸತಿಗೆ ರಾಜಸ್ವ ಲೆಕ್ಕದದಲ್ಲಿ 350 ಕೋಟಿ ರೂ. ಮಂಜೂರು ಮಾಡಲು ಪ್ರಸ್ತಾಪಿಸಲಾಗಿದೆ.
ಶಿಕ್ಷಣಕ್ಕೆ ರಾಜಸ್ವ ಲೆಕ್ಕದಲ್ಲಿ 1261 ಕೋಟಿ, ಬಂಡವಾಳ ಲೆಕ್ಕದಲ್ಲಿ 111 ಕೋಟಿ ರೂ. ವಾಣಿಜ್ಯ. ಮತ್ತು ಕೈಗಾರಿಕೆಗೆ ಸಂಬಂಧಿಸಿದ ವೆಚ್ಚಗಳ ಸಂದಾಯಕ್ಕಾಗಿ ರಾಜಸ್ವ ಲೆಕ್ಕದಲ್ಲಿ 53.79 ಕೋಟಿ, ಬಂಡವಾಳ ಲೆಕ್ಕದಲ್ಲಿ 37.59 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವೆಚ್ಚಗಳ ಸಂದಾಯಕ್ಕೆ ರಾಜಸ್ವ ಲೆಕ್ಕದಲ್ಲಿ 392,08 ಕೋಟಿ, ಮಂಜೂರು ಮಾಡುವ ಪ್ರಸ್ತಾಪ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 200 ಕೋಟಿ ರೂ. ಮಂಜೂರು ಮಾಡುವ ಪ್ರಸ್ತಾಪ ಮಾಡಲಾಗಿದೆ.
ಆರೋಗ್ಯ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 41.61 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 45.82 ಕೋಟಿ, ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿಗೆ ರಾಜಸ್ವ ಲೆಕ್ಕದಲ್ಲಿ 207.47 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 4.36 ಕೋಟಿ ರೂ., ಇಂಧನಕ್ಕೆ 10 ಕೋಟಿ, ಕನ್ನಡ ಮತ್ತು ಸಂಸ್ಕೃತಿಗೆ ರಾಜಸ್ವ ಲೆಕ್ಕದಲ್ಲಿ 27.44 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 28 ಕೋಟಿ ರೂ., ಯೋಜನೆ, ಸಾಂಖ್ಯಿಕ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ರಾಜಸ್ವ ಲೆಕ್ಕದಲ್ಲಿ 17.61 ಕೋಟಿ, ಬಂಡವಾಳ ಲೆಕ್ಕದಲ್ಲಿ 131.70 ಕೋಟಿ ರೂ, ಕಾನೂನಿಗೆ ರಾಜಸ್ವ ಲೆಕ್ಕದಲ್ಲಿ 32.41 ಕೋಟಿ, ಬಂಡವಾಳ ಲೆಕ್ಕದಲ್ಲಿ 6.92 ಕೋಟಿ ರೂ. ಹಾಗೂ ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆಗೆ ರಾಜಸ್ವ ಲೆಕ್ಕದಲ್ಲಿ 58.50 ಕೋಟಿ ರೂ ಹಾಗೂ ಬಂಡವಾಳ ಲೆಕ್ಕದಲ್ಲಿ 1 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂರಕ ಅಂದಾಜು ಮಂಡಿಸಿದರು. ನಂತರ ಸದನ ಧ್ವನಿಮತದ ಮೂಲಕ ಒಪ್ಪಿಗೆ ನೀಡಲಾಯಿತು.
ಕರ್ನಾಟಕ ಧನವಿನಿಯೋಗ ವಿಧೇಯಕ : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.
2022-23 ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳ 14,762 ಕೋಟಿ ರೂ. ಪೂರಕ ಅಂದಾಜುಗಳ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಮಂಡಿಸಿದ ಸಿಎಂ ಬೊಮ್ಮಾಯಿ, 2.71 ಲಕ್ಷ ಕೋಟಿಯಲ್ಲಿ ಶೇ.5.3 ರಷ್ಟು ಮೀರದಂತೆ ಮೊದಲ ಪೂರಕ ಅಂದಾಜು ಇದೆ.
ರಾಜಸ್ವ ಹೆಚ್ಚುವರಿ ಸಂಗ್ರಹವಾಗುತ್ತಿದೆ. ಕಳೆದ ಬಾರಿ ಕೋವಿಡ್ ಇದ್ದರೂ ಗುರಿ ಮೀರಿ ಸಂಗ್ರಹ ಮಾಡಿದ್ದೆವು. ಸೆಮಿಕಂಡಕ್ಟರ್ ಕೊರತೆ ಕಾರಣ ಮೋಟಾರ್ ವಾಹನ ತೆರಿಗೆಯಲ್ಲಿ ಕಳೆದ ಬಾರಿ ಕಡಿಮೆಯಾಗಿತ್ತು.ಆದರೆ ಈ ಬಾರಿ ಆ ಸಮಸ್ಯೆ ಕೂಡ ಪರಿಹಾರವಾಗಿದ್ದು, ಗುರಿ ಮೀರಿ ಹೆಚ್ಚು ತೆರಿಗೆ ಸಂಗ್ರಹ ನಿರೀಕ್ಷೆ ಇದೆ ಎಂದರು.
ಜಿಎಸ್ಟಿ ತೆರಿಗೆ ಹೆಚ್ಚಿನ ಪರಿಹಾರ ಬಂದಿದೆ : ನಾವು 5 ಸಾವಿರ ಕೋಟಿ ನಿರೀಕ್ಷೆ ಇರಿಸಿಕೊಂಡಿದ್ದೆವು. ಆದರೆ, 8 ಸಾವಿರ ಕೋಟಿ ಜಿಎಸ್ಟಿ ಬಂದಿದೆ. ಅದಕ್ಕೆ ಇನ್ನು ಮೂರು ನಾಲ್ಕು ಕೋಟಿ ಸೇರುವ ನಿರೀಕ್ಷೆ ಇದೆ. ಇನ್ನು14 ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಿದೆ. ಈ ವರ್ಷ ಮತ್ತು ಮುಂದಿನ ವರ್ಷ ಆ ಹಣ ಕೊಡಲು ನಿರ್ಣಯವಾಗಿದೆ. ಕೋವಿಡ್ ಬಂದ ನಂತರ ನಮ್ಮ ಸಾರಿಗೆ ನಿಗಮ ನಷ್ಟದಲ್ಲಿದ್ದವು. ಅವುಗಳ ಡೀಸೆಲ್, ವೇತನ, ಪಿಎಫ್,ಇಎಸ್ಐ ಬಾಕಿ ಇತ್ತು. 1200 ಕೋಟಿ ಅದಕ್ಕೆ ಕೊಡಲಾಗಿದೆ. ನಿಗಮಗಳ 989 ಕೋಟಿ ಮೋಟಾರ್ ತೆರಿಗೆಯನ್ನು ಶೇರು ಬಂಡವಾಳವನ್ನಾಗಿ ಮಾಡಿದ್ದೇವೆ.
ವಿವಿಧ ಹಿಂದುಳಿದ ವರ್ಗಗಳಿಗೆ ಪೂರಕ ಅಂದಾಜಿನಲ್ಲಿ ಅನುದಾನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ದುಡಿಯುವ ವರ್ಗವನ್ನು ಕಡೆಗಣಿಸಿಲ್ಲ : ಯಾರು ಕಾಯಕ ಮಾಡಿಕೊಂಡಿದ್ದಾರೋ, ಶ್ರಮಿಕರು, ದುಡಿಯುವ ವರ್ಗವಿದ್ದಾರೋ ಅವರಿಗೆ ಆಧ್ಯತೆ ನೀಡಲಾಗಿದೆ.ರೈತರು, ಮೀನುಗಾರರು, ನೇಕಾರರು ಆಟೋ, ಟ್ಯಾಕ್ಸಿ ಚಾಲಕರಿಗೆ ಅನುಕೂಲ ಮಾಡಲಾಗಿದೆ. ಹಳ್ಳಿಯಲ್ಲಿರುವ ಕುರುಬ,ಕುಂಬಾರ, ಬಡಗಿ ಕಾಯಕಗಳಿಗೆ ವಿಶೇಷ ಯೋಜನೆ ಮಾಡಿದ್ದೇವೆ.ನಾವು ದುಡಿಯುವ ವರ್ಗ ಕಡೆಗಣಿಸಿಲ್ಲ.
ಅಲ್ಪಸಂಖ್ಯಾತರ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳಿಸುವ ಯೋಜನೆ ಪ್ರಕಟಿಸಿದ್ದು ಅದನ್ನು ಮಾಡಲಾಗುತ್ತದೆ. ಒಂದು ವರ್ಷದ ಅನುದಾನ ಬಾಕಿ ಇದೆ ಎನ್ನಲಾಗಿದೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಬಡ ಕುಟುಂಬಗಳಿಗೆ ಶಿಕ್ಷಣ ಮುಖ್ಯ. ಆ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದರು.
ಕೆಲ ಮಠ ಮಾನ್ಯಗಳು ಸರ್ಕಾರ ಮಾಡುವ ಕೆಲಸ ಮಾಡುತ್ತಿವೆ. ಶಿಕ್ಷಣ, ಅನ್ನದಾನ, ವಸತಿ ಶಾಲೆ ಮಾಡಿದ್ದಾರೆ ಅದನ್ನು ನೋಡಿ ಅನುದಾನ ಕೊಡಲಾಗುತ್ತದೆ. ಕೆಲವರು ಕೊಟ್ಟ ಉದ್ದೇಶಕ್ಕೆ ಬಳಸದೆ ಇರಬಹುದು. ಆದರೆ ಮಠಗಳಲ್ಲಿ ಮಕ್ಕಳಿದ್ದಾರೆ ಅವರಿಗೆ ಅನುಕೂಲ ಮಾಡಿಕೊಡಬೇಕು. ಉದಾಹರಣೆಗೆ ಕೊಪ್ಪಳದ ಗವಿಮಠದಲ್ಲಿ ಮೂರು ಸಾವಿರ ಮಕ್ಕಳಿದ್ದಾರೆ.
ಒಂದು ಪೈಸೆಯನ್ನೂ ಮಕ್ಕಳಿಂದ ಮಠ ಪಡೆಯಲ್ಲ, ಈಗ ಕೋವಿಡ್ ಕಾರಣಕ್ಕೆ ಎಲ್ಲರೂ ಪಾಸ್ ಆಗಿದ್ದರಿಂದ ಅಲ್ಲಿ ಐದು ಸಾವಿರ ಮಕ್ಕಳಿದ್ದಾರೆ. ಊಟಕ್ಕೆ ಭಕ್ತರು ಸಹಕಾರ ಮಾಡುತ್ತಿದ್ದಾರೆ. ಆದರೆ ವಸತಿಗೆ ಸಮಸ್ಯೆಯಾಗಿದೆ.ಮಠ ಸರ್ಕಾರದಿಂದ ಈವರೆಗೂ ಏನೂ ಅನುದಾನ ಪಡೆದಿಲ್ಲ.ಈ ಬಾರಿಯೂ ಕೇಳಿಲ್ಲ ಅಲ್ಲಿನ ಜನರು ಬಂದು ಹೇಳಿದ್ದರಿಂದ ಪರಿಸ್ಥಿತಿ ನೋಡಿ ನಾನೇ ಅನುದಾನ ನೀಡಿದ್ದೇನೆ. ಈ ರೀತಿ ಪರಿಸ್ಥಿತಿ ನೋಡಿ ಅನುದಾನ ನೀಡಿದ್ದೇನೆ ಎಂದು ಮಠ ಮಾನ್ಯಗಳಿಗೆ ಅನುದಾನ ನೀಡುವುದನ್ನು ಸಿಎಂ ಸಮರ್ಥಿಸಿಕೊಂಡರು.
ಕಾಮನ್ ವೆಲ್ತ್ ಒಲಂಪಿಕ್ ವಿಜೇತರ ಬಹುಮಾನ ಮೊತ್ತ ಹೆಚ್ಚಳ : ಕಾಮನ್ ವೆಲ್ತ್, ಏಷಿಯನ್ ಗೇಮ್, ಒಲಿಂಪಿಕ್ಸ್ ಗೆ ನೀಡುವ ಬಹುಮಾನದ ಮೊತ್ತ ಹೆಚ್ಚಿಸಲಾಗುತ್ತದೆ. ಬೇರೆ ರಾಜ್ಯದವರು ಕೊಡುವುದಕ್ಕಿಂತ ನಾವು ಹೆಚ್ಚು ಕೊಡಲಿದ್ದೇವೆ. ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಗ್ರಾಮೀಣ ಕ್ರೀಡೆ ಉತ್ತೇಜನಕ್ಕೆ ಮುಂದಾಗಿದ್ದೇವೆ.ಕ್ರೀಡಾವಲಯಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಖೇಲೋ ಇಂಡಿಯಾಗೆ ನಾವು ವಿಶೇಷ ಅನುದಾನ ಕೊಟ್ಟಿದ್ದೇವೆ ಎಂದರು.
ವಿಶೇಷ ಪ್ಯಾಕೇಜ್ ಇಲ್ಲ :ನೆರೆಹಾನಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಶೇಷ ಅನುದಾನ ಕೊಡುವ ಬೇಡಿಕೆ ಪ್ರತಿಪಕ್ಷದಿಂದ ಬಂದಿದೆ. ಆದರೆ ನಾವು ಬೇರೆ ರಾಜ್ಯಗಳು ಕೊಡುವ ಪರಿಹಾರಕ್ಕಿಂತ ಹೆಚ್ಚು ಕೊಡುತ್ತಿದ್ದೇವೆ. ಬೆಳೆಹಾನಿ ಪರಿಹಾರ, ಮನೆಹಾನಿ, ಪ್ರಾಣಹಾನಿಗೆ ನಾವು ಹೆಚ್ಚು ಪರಿಹಾರ ಕೊಡುತ್ತಿದ್ದೇವೆ. ವಾಣಿಜ್ಯ ನಷ್ಟ ಪರಿಹಾರ ವ್ಯಾಪ್ತಿಗೆ ಬರದಿದ್ದರೂ ಈ ಬಾರಿ ನಾವು ಪರಿಹಾರ ಕೊಡಲು ಮುಂದಾಗಿದ್ದೇವೆ. ಯಾವುದಕ್ಕೂ ಕಡಿಮೆಯಾಗದಂತೆ ನೋಡಿಕೊಳ್ಳಲಿದ್ದೇವೆ ಎಂದರು.
ಸಾರಿಗೆ ನಿಗಮಗಳ ಸುಧಾರಣೆ : ಸಾರಿಗೆ ನಿಗಮಗಳ ಸುಧಾರಣೆಗೆ ಶ್ರೀನಿವಾಸಮೂರ್ತಿ ವರದಿ ಬಂದಿದೆ. ಸಾರಿಗೆ ನಿಗಮಗಳ ಆದಾಯ ಹೆಚ್ಚಳ ಮತ್ತು ಸರ್ಕಾರ ಯಾವ ರೀತಿ ಸಹಾಯ ಮಾಡಬೇಕು ಎಂದು ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಇವಿ ಬಸ್ ಗಳು ಕೇಂದ್ರದ ಅನುದಾನದಿಂದ ಬರುತ್ತಿದ್ದು ಅವು ಬಿಎಂಟಿಸಿ ಆಸ್ತಿಯಾಗಲಿವೆ ಎಂದರು.
ಸದಸ್ಯರ ಸಲಹೆ ಆಲಿಸಿ ಹಣಕಾಸು ಲಭ್ಯತೆ ಆಧಾರದಲ್ಲಿ ಮಂಡಿಸಿದ ಧನವಿನಿಯೋಗ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಸಿಎಂ ಮನವಿ ಮಾಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ : ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ: ಪತಿ ಪತ್ನಿ ಮತ್ತು ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ