ಬೆಂಗಳೂರು: ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಬಂಧನವಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅವರ ಒಂದು ದಿನದ ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗಲಿದೆ.
ಹೀಗಾಗಿ ಇಂದು ಮಧ್ಯಾಹ್ನ 1:30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಸಿಬಿಗೆ ಕೋರ್ಟ್ ಸೂಚನೆ ನೀಡಿದ ಕಾರಣ, ಮಧ್ಯಾಹ್ನ 67ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶೆ ಕಾತ್ಯಾಯಿನಿ ಮುಂದೆ ಹಾಜರುಪಡಿಸಲು ಸಿಸಿಬಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಎರಡು ದಿನದ ಸಿಸಿಬಿ ವಿಚಾರಣೆ ವೇಳೆ ಸರಿಯಾಗಿ ಸಂಪತ್ ರಾಜ್ ಸ್ಪಂದಿಸದ ಹಿನ್ನೆಲೆ ಮತ್ತೆ ಒಂದು ದಿನ ನ್ಯಾಯಾಲಯ ಅವರನ್ನು ಸಿಸಿಬಿ ಕಸ್ಟಡಿಗೆ ನೀಡಿತ್ತು. ಹೀಗಾಗಿ ಸಂಪತ್ ರಾಜ್ ಮುಂದೆ ಟೆಕ್ನಿಕಲ್ ಎವಿಡೆನ್ಸ್ ಆಧಾರಗಳನ್ನ ಮುಂದಿಟ್ಟುಕೊಂಡು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಂಪತ್ ರಾಜ್ ಅನಾರೋಗ್ಯ ನೆಪ ತಿಳಿಸಿದ್ದಾರೆ.
ಈಗಾಗಲೇ ಸಂಪತ್ ರಾಜ್ ಸಿಸಿಬಿ ತನಿಖಾಧಿಕಾರಿಗಳಿಗೆ ತಮ್ಮ ಮೊಬೈಲ್ ಹಾಗೂ ಅದರ ಪಾಸ್ವರ್ಡ್ ಸಹ ಕೊಟ್ಟಿದ್ದಾರೆ.ಸಂಪತ್ ರಾಜ್ ಗೆ ಬಿಪಿ ಇದ್ದು, ಅವರು ಅನಾರೋಗ್ಯದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಅವರು ರೆಸ್ಟ್ನಲ್ಲಿರಬೇಕು ಅವರನ್ನು ಡೇ ಟೈಮ್ ನಲ್ಲಿ ಮಾತ್ರ ವಿಚಾರಣೆ ನಡೆಸಬೇಕಿತ್ತು. ಆದ್ರೆ ರಾತ್ರಿ ವೇಳೆ ಕೂಡ ವಿಚಾರಣೆ ನಡೆಸಿರೋದ್ರಿಂದ ಸಂಪತ್ ಬಿಪಿ, ಶುಗರ್ ಲೆವೆಲ್ ಏರುಪೇರಾಗಿದೆ. ಈಗಾಗಲೇ ಸಂಪತ್ ರಾಜ್ ಮೂರು ದಿನಗಳ ಕಾಲ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಮತ್ತೆ ಅವರ ವಿಚಾರಣೆ ಅವಶ್ಯಕತೆ ಇಲ್ಲವೆಂದು ಸಂಪತ್ ರಾಜ್ ಪರ ವಕೀಲರು ಆರೋಪಿಯನ್ನು ಸಿಸಿಬಿ ಕುಣಿಕೆಯಿಂದ ತಪ್ಪಿಸಲು ಹೀಗೆ ವಾದ ಮಾಡುವ ಸಾಧ್ಯತೆಯಿದೆ.
ಆದರೆ ಸಿಸಿಬಿ ಪೊಲೀಸರು ಇನ್ನೂ ವಿಚಾರಣೆ ಅಗತ್ಯ ಇರುವ ಹಿನ್ನೆಲೆ ಮತ್ತೆ ಕಸ್ಟಡಿಗೆ ಪಡೆಯಲು ನಿರ್ಧಾರ ಮಾಡಿದ್ದಾರೆ.