ಬೆಂಗಳೂರು: ಗೋಪಾಲಯ್ಯ ವಿರುದ್ಧ ನಮ್ಮವರನ್ನು ಗೆಲ್ಲಿಸುವುದನ್ನೇ ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಮಾತ್ರ ಶಾಶ್ವತ ಅಂತಾ ಭಾವಿಸಿ. ಪಕ್ಷಕ್ಕೆ ನಿಷ್ಠೆಯಿಂದ ಇರುವವರನ್ನು ಬೆಳೆಸಿ. ಪಕ್ಷವನ್ನು ಉಳಿಸಲು ಶ್ರಮಿಸಿ. ಪ್ರತಿ ವಾರ್ಡ್‌ಗೆ ನಾನೇ ಬರುತ್ತೇನೆ. ಜನರಲ್ಲಿ ಕೈಮುಗಿದು ಮತ ಕೇಳುತ್ತೇನೆ. ಕ್ಷೇತ್ರದಲ್ಲಿ ಗೋಪಾಲಯ್ಯ ಕಷ್ಟದಲ್ಲಿದ್ದಾಗ ಅವರ ರಕ್ಷಣೆಗೆ 25 ಯುವಕರನ್ನು ನೀಡಿದ್ದೆ. ಪೊಲೀಸ್ ರಕ್ಷಣೆ ಕೊಡಿಸಿದ್ದೆ. ಹಂತ ಹಂತವಾಗಿ ಪಕ್ಷದಲ್ಲಿ ಬೆಳೆಸಿದ್ದೆ ಎಂದು ಸಭೆಯಲ್ಲಿ ಹೆಚ್ ಡಿ ದೇವೇಗೌಡ ಹೇಳಿದರು.
ನಂಬಿದ್ದ ಗೋಪಾಲಯ್ಯ ಮೋಸ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ಮೊದಲ ಬಾರಿ ಅವರ ಶ್ರೀಮತಿಯನ್ನು ಉಪಮೇಯರ್ ಮಾಡಿಸಿ, ಬಜೆಟ್ ಮಂಡಿಸುವ ಅವಕಾಶ ನೀಡಿದ್ದೆ. ಪಕ್ಷ ದ್ರೋಹಿಗಳಿಗೆ ಶಿಕ್ಷೆ ಆಗಬೇಕು. ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ. ಮುಂದಿನ ಪೀಳಿಗೆಗೆ ಏಕಚಕ್ರಾಧಿಪತ್ಯದಿಂದ ಆಗುವ ಹಾನಿ ತಪ್ಪಿಸಲು ಈ ಕ್ಷೇತ್ರದ ಜನ ಮುಂದಾಗಬೇಕು. ನಾವು ರಾಜ್ಯಕ್ಕೆ, ರಾಷ್ಟ್ರಕ್ಕೆ ಏನು ನೀಡಿದ್ದೇವೆ ಎನ್ನುವುದು ಗೊತ್ತಿದೆ, ಅದನ್ನು ತಿಳಿಸುತ್ತೇನೆ ಎಂದರು. ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ. ಈ ಕ್ಷೇತ್ರದ ಜನ ಗೋಪಾಲಯ್ಯಗೆ ಸರಿಯಾದ ಪಾಠ ಕಲಿಸಬೇಕು. ತಪ್ಪಿಗೆ ಸರಿಯಾದ ಶಿಕ್ಷೆ ನೀಡಿ ಎಂದು ಜನರಲ್ಲಿ ಕೇಳಿಕೊಂಡರು.
ಕಾಂಗ್ರೆಸ್ ಬಳಿ ಹೋಗಿಲ್ಲ
ಅಧಿಕಾರದ ಆಸೆ ನಮಗಿಲ್ಲ. ನಾವು ಯಾವ ಸಂದರ್ಭದಲ್ಲೂ ಕಾಂಗ್ರೆಸ್ ಜೊತೆ ಸರ್ಕಾರ ರಚನೆಗೆ ಮುಂದಾಗಿಲ್ಲ. ಅವರಾಗಿಯೇ ನಮ್ಮ ಬಳಿ ಬಂದು ಕೇಳಿದ್ದರಿಂದ ಸರ್ಕಾರದ ಭಾಗವಾಗಿದ್ದೆವು. ನಮ್ಮ ಕುಟುಂಬಕ್ಕೆ ಅಧಿಕಾರವನ್ನು ಅನುಭವಿಸುವ ಆಸೆ ಇಲ್ಲ. ಆದರೆ, ಪಕ್ಷಕ್ಕೆ ನಿಷ್ಠರಾಗಿಲ್ಲದವರನ್ನು ಸೋಲಿಸುವ ಸಲುವಾಗಿ ನಮ್ಮನ್ನು ಬೆಂಬಲಿಸಿ. ನಾವು ಯಾವತ್ತೂ ಅಧಿಕಾರದ ಹಿಂದೆ ಬಿದ್ದವರಲ್ಲ ಎಂದರು.
ನನ್ನ ಪಾಲಿಗೆ ಆತ ಕಾಮಾಕ್ಷಿಪಾಳ್ಯ ಗೋಪಿ : ವೈಎಸ್ಪಿ ದತ್ತಾ
ಮಾಜಿ ಶಾಸಕ ವೈಎಸ್ವಿ ದತ್ತ ಮಾತನಾಡಿ, ನಿಮಗೆಲ್ಲಾ ಆತ ಎಂಎಲ್‌ಎ ಗೋಪಾಲಯ್ಯ. ಆದರೆ, ಆತ ನನ್ನ ಪಾಲಿಗೆ ಕಾಮಾಕ್ಷಿಪಾಳ್ಯದ ಗೋಪಿ. 40 ವರ್ಷ ಹಿಂದೆ ನಾನು ಟ್ಯುಟೋರಿಯಲ್ ಮಾಡುತ್ತಿದ್ದಾಗ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಓದಿಸಿದೆ. ಉಚಿತ ಟ್ಯೂಷನ್ ಕೊಟ್ಟೆ. ಪ್ಯಾಂಟ್, ಶರ್ಟ್, ಚಪ್ಪಲಿ ಕೊಡಿಸಿದೆ. ಅವನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಸಿಂಧ್ಯಾ ಆರೋಗ್ಯ ಸಚಿವರಾಗಿದ್ದಾಗ ಅಟೆಂಡರ್ ಬೇಕು ಅಂದಾಗ ಬಡವ ಅಂತಾ ಗೋಪಾಲಯ್ಯನನ್ನು ಟೆಲಿಫೋನ್ ಆಪರೇಟರ್ ಆಗಿ ಸೇರಿಸಿದ್ದೆ. ಇಂದು ಈ ಹಂತಕ್ಕೆ ಬೆಳೆದಿದ್ದಾನೆ. ಪಕ್ಷಕ್ಕೆ ಆತನ ದ್ರೋಹ ಬಗೆಯಬಾರದಿತ್ತು ಅಂತಾ ವೈಎಸ್ವಿ ದತ್ತಾ ಶಿಷ್ಯನ ವಿರುದ್ಧ ಕಿಡಿಕಾರಿದರು.
ಗೋಪಾಲಯ್ಯ ಬೆನ್ನಿಗೆ ಚೂರಿ ಹಾಕಿದ್ದಾರೆ : ಉಪಮೇಯರ್ ಭದ್ರೇಗೌಡ
ಉಪಮೇಯರ್ ಭದ್ರೇಗೌಡ ಮಾತನಾಡಿ, ಪಕ್ಷ ತೀವ್ರ ಸಂಕಷ್ಟದಲ್ಲಿದೆ. ಪಕ್ಷಕ್ಕೆ ಬಲ ತುಂಬಬೇಕಾದ ಅಗತ್ಯವಿದೆ. ಮೋಸ, ವಂಚನೆ ಮಾಡಿದವರಿಗೆ ಪಾಠ ಕಲಿಸಬೇಕಿದೆ. ಗೋಪಾಲಯ್ಯ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಇವರಿಗೆ ದೇವೇಗೌಡರಿಂದ ಏನು ತೊಂದರೆ ಆಗಿದೆ. 500 ಕೋಟಿ ರೂ. ಮೊತ್ತದ ಅನುದಾನವನ್ನು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಅಭಿವೃದ್ಧಿಗೆ ಕುಮಾರಸ್ವಾಮಿ ನೀಡಿದ್ದಾರೆ. ಏನೂ ಕೊಟ್ಟಿಲ್ಲ ಅಂತಾ ಆರೋಪಿಸುವುದು ಸರಿಯಲ್ಲ ಎಂದು ಗೋಪಾಲಯ್ಯ ವಿರುದ್ದ ಹರಿಹಾಯ್ದರು.