ಬೆಂಗಳೂರು: ಹೆಚ್.ಡಿ ದೇವೇಗೌಡ. ಈ ಹೆಸರು ಕೇಳಿದ ತಕ್ಷಣವೇ ಇಡೀ ದೇಶವೇ ಒಂದು ಕ್ಷಣ ಕರ್ನಾಟಕದತ್ತ ತಿರುಗಿ ನೋಡುತ್ತದೆ. ಆ ಹೆಸರಿಗಿರುವ ಶಕ್ತಿಯೇ ಅಂಥದ್ದು. ದೊಡ್ಡಗೌಡರ ಉಸಿರಲ್ಲಿ ರಾಜಕೀಯ ಅಷ್ಟರ ಮಟ್ಟಿಗೆ ರಾಜಕೀಯ ಬೆರೆತು ಹೋಗಿದೆ. ಆದ್ರೆ, ಇದೇ ದೇವೇಗೌಡರು ಹಾಗು ಅವರ ಪುತ್ರ ಪೂರ್ಣ ಪ್ರಮಾಣದ ರಾಜಕೀಯ ಅಧಿಕಾರದಿಂದಲೂ ವಂಚಿತರಾಗುತ್ತಿದ್ದಾರೆ. ಹಿಂದಿನ ರಾಜಕೀಯ ಇತಿಹಾಸ, ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದ್ರೆ ಇದು ನಿಜ ಅಂತನ್ನಿಸುತ್ತೆ!
ಈಗ ದೇವೇಗೌಡರ ಬಗ್ಗೆ ಏಕೆ ಮಾತನಾಡುತ್ತಿರುವುದಕ್ಕೆ ಬಲವಾದ ಕಾರಣವಿದೆ. ರಾಜ್ಯ ಇಲ್ಲವೇ ರಾಷ್ಟ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರವನ್ನು ಅನುಭವಿಸುವ ಭಾಗ್ಯ ಗೌಡರ ಕುಟುಂಬದ ಯಾವೊಬ್ಬ ಸದಸ್ಯರಿಗೂ ಇದುವರೆಗೂ ಸಿಕ್ಕಿಲ್ಲ.
ಅದು 1996 ನೇ ಇಸವಿ. ಕೇಂದ್ರದಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಿ.ವಿ.ನರಸಿಂಹರಾವ್ ಅವರ ಕ್ರಾಂತಿಕಾರಿ ಅವಧಿಯ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಲಿಲ್ಲ. ಆ ಸಂದರ್ಭದಲ್ಲಿ ಲೋಕ ಸಮರದಲ್ಲಿ 161 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ ಪ್ರಧಾನಿ ರೇಸ್ನಲ್ಲಿದ್ದಿದ್ದು ವಿ.ಪಿ.ಸಿಂಗ್, ಹರ್ಕಿಷನ್ ಸಿಂಗ್ ಸುರ್ಜೀತ್, ಲಾಲು ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ಪಶ್ಚಿಮ ಬಂಗಾಳದ ದೀರ್ಘಕಾಲದ ಮುಖ್ಯಮಂತ್ರಿ ಜ್ಯೋತಿ ಬಸು. ಆದರೆ, ಅದೃಷ್ಟ ಒಲಿದಿದ್ದು ಮಾತ್ರ ಹೆಚ್.ಡಿ ದೇವೇಗೌಡರಿಗೆ. ಆಗ ಕರ್ನಾಟಕದಲ್ಲಿ ಜನತಾದಳ 16 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು.
ಸಾಮಾನ್ಯ ರೈತ ಕುಟುಂಬದಿಂದ ಬಂದು, ಭುಜದ ಮೇಲೆ ಶಾಲು, ಪಂಚೆ ಧರಿಸಿದ ಕನ್ನಡಿಗನೊಬ್ಬ ದೇಶದ 11ನೇ ಪ್ರಧಾನಿಯಾಗಿ 1996 ಜೂನ್ 1ರಂದು ದಕ್ಷಿಣ ಭಾರತದಿಂದ ಎರಡನೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿಯೇ ಬಿಟ್ಟರು. ಅಂದಿನ ಪರಿಸ್ಥಿತಿಯಲ್ಲಿ ರಾಜಕೀಯ ಒಳಜಗಳದ ಕಾರಣ ಅಸ್ಥಿರತೆಯಿಂದ ಕೇವಲ ಹನ್ನೊಂದು ತಿಂಗಳಿಗೆ ಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಕರ್ನಾಟಕದ ವಿಷಯಕ್ಕೆ ಬಂದ್ರೆ, 1994ರಲ್ಲಿ ರಾಜ್ಯದ 14ನೇ ಮುಖ್ಯಮಂತ್ರಿಯಾದ್ರೂ ಕೇವಲ 2 ವರ್ಷದಲ್ಲೇ ಅಧಿಕಾರ ಕಳೆದುಕೊಳ್ಳಬೇಕಾಯ್ತು.
ತಂದೆಯಂತೆ ಮಗ!
ಅದು 2004. ಧರಂಸಿಂಗ್ ಮತ್ತು ಸಿದ್ದರಾಮಯ್ಯ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದಕ್ಕೆ ಪ್ರಮುಖ ಕಾರಣ ಜೆಡಿಎಸ್. ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ಪ್ರಭಾವ ಬೀರಿದ ಪಕ್ಷ ಒಕ್ಕಲಿಗ ಮತಗಳನ್ನು ಹೆಚ್ಚಾಗಿ ಪಡೆದುಕೊಂಡಿತ್ತು. ಇತ್ತ ಕುರುಬ ಸಮುದಾಯದಿಂದ ಪ್ರಭಾವಿ ನಾಯಕರಾಗಿದ್ದು ಇದೇ ಮಾಜಿ ಸಿಎಂ ಸಿದ್ದರಾಮಯ್ಯ. ಜೆಡಿಎಸ್ಗೆ ಉಪ ಮುಖ್ಯಮಂತ್ರಿ ಸ್ಥಾನ, ಕಾಂಗ್ರೆಸ್ಗೆ ಸಿಎಂ ಸ್ಥಾನ ಹಂಚಿಕೆಯಾಗಿ ಸರ್ಕಾರ ರಚಿಸಲಾಯಿತು.
ಅಹಿಂದ ನಾಯಕನಾಗಿ ಬೆಳೆಯಲು ಸಿದ್ದರಾಮಯ್ಯ ಪಣತೊಟ್ಟು ನಿಂತಿದ್ದರು. ಆದರೆ ಇದಕ್ಕೆ ಅಡ್ಡಗಾಲು ಹಾಕಿದ್ದು ದೇವೇಗೌಡರು ಎಂಬ ಮಾತು ಸದಾ ಪ್ರಚಲಿತದಲ್ಲಿದೆ. ತದನಂತರ ಇಬ್ಬರ ನಡುವೆ ಸಾಕಷ್ಟು ಮನಸ್ತಾಪ ಉಂಟಾಗಿದ್ದು ಜಾಗಜ್ಜಾಹೀರಾಗಿತ್ತು. ಅನೇಕ ಕಾರಣಗಳಿಂದ ಸಿದ್ದರಾಮಯ್ಯರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಈಗ ಇತಿಹಾಸ. ಆಗ ಡಿಸಿಎಂ ಆಗುವ ಅದೃಷ್ಟ ಒಲಿದು ಬಂದಿದ್ದು ದಿ.ಎಂ.ಪಿ ಪ್ರಕಾಶ್ ಅವರಿಗೆ. ಆದರೆ ಕಾರಣಾಂತರದಿಂದ ಜೆಡಿಎಸ್ ಕಾಂಗ್ರೆಸ್ಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು.
2006ರಲ್ಲಿ ಆಸ್ತಿತ್ವಕ್ಕೆ ಬಂದಿದ್ದೇ 20-20 ಸರ್ಕಾರ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾತುಕತೆ ನಡೆದು ಕುಮಾರಸ್ವಾಮಿ ರಾಜ್ಯದ ಸಿಎಂ ಆದ್ರೆ, ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದ್ರು. ಆದರೆ 20 ತಿಂಗಳು ಸಿಎಂ ಆಗಿ ಕೆಲಸ ಮಾಡಿದ ಕುಮಾರಸ್ವಾಮಿ, ಇನ್ನೂ 20 ತಿಂಗಳು ಅಧಿಕಾರವನ್ನು ಬಿಜೆಪಿಗೆ ಬಿಟ್ಟುಕೊಡದ ಕಾರಣ ಆ ಸರ್ಕಾರ ಕುಸಿದು ಬಿದ್ದಿತ್ತು. ಆಗ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದು ಕೇವಲ 20 ತಿಂಗಳು ಮಾತ್ರ.
ಇಂದಿನ ರಾಜಕೀಯ ಪರಿಸ್ಥಿತಿ:
ಇಂದು ಕರ್ನಾಟಕ ಸರ್ಕಾರ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. 79 ಸ್ಥಾನಗಳೊಂದಿಗೆ ಕಾಂಗ್ರೆಸ್ ಎರಡನೇ ಸ್ಥಾನ ಪಡೆದರೆ ಜೆಡಿಎಸ್ ಕೇವಲ 37 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್, 37 ಸ್ಥಾನ ಪಡೆದಿದ್ದ ಜೆಡಿಎಸ್ಗೆ ಬೇಷರತ್ ಬೆಂಬಲ ನೀಡಿ ಸರ್ಕಾರ ರಚಿಸಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿತು. ಕಾರಣಾಂತರಗಳಿಂದ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ 1 ಸ್ಥಾನ,ಬಿಜೆಪಿ 2 ಸ್ಥಾನ ಪಡೆದುಕೊಂಡಿವೆ.
ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಜೆಡಿಎಸ್-ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಗೆದ್ದು ತೀವ್ರ ಮುಖಭಂಗ ಅನುಭವಿಸಿದ್ದವು. ಬಿಜೆಪಿ 25, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನ 12 ಮತ್ತು ಜೆಡಿಎಸ್ 3 ಶಾಸಕರು ರಾಜೀನಾಮೆ ನೀಡಿದ್ದು,ರಾಜ್ಯದಲ್ಲಿ ರಾಜಕೀಯ ಹೈಡ್ರಾಮ ನಡೆಯುತ್ತಿದೆ. ಇದರಿಂದ ಹೆಚ್ಡಿಕೆ ಸಿಎಂ ಆಗಿ ಒಂದು ವರ್ಷವಾದ ಬಳಿಕ ಮತ್ತೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮುಂದೇನು? ಎಂಬುದನ್ನು ಕಾದು ನೋಡಬೇಕಿದೆ.