ಬೆಂಗಳೂರು: ಮೋಜು ಮಸ್ತಿ ಮಾಡಲು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದಿಯುತ್ತಿದ್ದ ಪ್ರಮುಖ ಆರೋಪಿ ಸೇರಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಡೆಂಕಣಿಕೋಟೆಯ ಮನೋಜ್ ಕುಮಾರ್, ಆಂಧ್ರಪ್ರದೇಶ ಕರ್ನೂಲ್ ಮೂಲದ ಸೂರ್ಯ ಭಾಸ್ಕರ್ ಬಂಧಿತ ಆರೋಪಿಗಳು. ಬಂಧಿತರಿಂದ 56 ಲಕ್ಷ ಮೌಲ್ಯದ 1,167 ಕೆ.ಜಿ.ಚಿನ್ನ , 300 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನಲ್ಲಿ ಖಾಸಗಿ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ ಮನೋಜ್ 9ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ. ಬೆಳೆಸಿಕೊಂಡಿದ್ದ ದುಶ್ಚಟಗಳ ಈಡೇರಿಕೆ ಹಾಗೂ ಮೋಜು ಮಸ್ತಿ ಮಾಡಲು ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿ ಎರಡು ವರ್ಷಗಳ ಹಿಂದೆ ಜೈಲು ಸೇರಿದ್ದ. ಜೈಲಿಂದ ಹೊರಬಂದ ನಂತರ ಮತ್ತೆ ಹಳೆ ಕಾಯಕ ಮೈಗೊಡಿಸಿಕೊಂಡ ಖದೀಮ ನಗರಕ್ಕೆ ಬಂದು ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಮನೆ ಬೀಗ ಹಾಗೂ ಕಿಟಕಿ ಸರಳುಗಳನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ.
ಕೃತ್ಯ ಬಳಿಕ ಕದ್ದ ಚಿನ್ನಾಭರಣಗಳನ್ನು ಆಚಾರಿ ಕೆಲಸ ಮಾಡುವ ಪ್ರಕರಣದ ಎರಡನೇ ಆರೋಪಿ ಸೂರ್ಯ ಭಾಸ್ಕರ್ ಪಡೆದುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ, ಐದು ಕಳವು ಪ್ರಕರಣಗಳು ಪತ್ತೆ ಹಚ್ಚಿದಂತಾಗಿವೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.