ಬೆಂಗಳೂರು: ಡಾರ್ಕ್ನೆಟ್ ಜಾಲತಾಣ ಮೂಲಕ ವಿದೇಶಿ ಅಂಚೆ ಕಚೇರಿಯಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ ಆರೋಪದಡಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಸೇರಿದಂತೆ ಇದುವರೆಗೂ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಂಜಯ ನಗರದ ನಿವಾಸಿಗಳಾದ ಸುಜಯ್, ಪ್ರಸಿದ್ಧಿ ಶೆಟ್ಟಿ, ಮದನ್, ಆಶೀಶ್, ಕೊಡಗಿನ ಹೇಮಂತ್ ಮುದ್ದಪ್ಪ, ಕುಮುಟಾ ಮೂಲದ ಸುನೀಶ್ ಹೆಗ್ಡೆ, ಹಾವೇರಿಯ ದರ್ಶನ ಲಮಾಣಿ, ಮಲ್ಲೇಶ್ವರಂ ಪಂಕಜ ಕೋಠಾರಿ ಬಂಧಿತ ಆರೋಪಿಗಳು.
ಗಾಂಜಾ ತರಿಸುತ್ತಿದ್ದದ್ದು ಹೇಗೆ ?
ಎಂಟು ಜನರು ಒಂದೇ ಗ್ಯಾಂಗ್‌ನ ಸದಸ್ಯರಾಗಿದ್ದಾರೆ. ಲೋಕಲ್ ಗಾಂಜಾ ಕಿಕ್ ಕೊಡಲ್ಲ ಎಂಬ ಕಾರಣಕ್ಕೆ ಡಾರ್ಕ್ ವೆಬ್ ಮೂಲಕ ವಿದೇಶದಿಂದ ಹೈಡ್ರೋ ಗಾಂಜಾ ತರಿಸುವ ಇವರು, ಡಾರ್ಕ್ ವೆಬ್‌ನಲ್ಲಿ ಬುಕ್ ಮಾಡಿದ ನಂತರ ಟ್ರ್ಯಾಕಿಂಗ್ ಐಡಿಯನ್ನು ಪಡೆದುಕೊಳ್ಳುತ್ತಾರೆ. ವಿದೇಶದಿಂದ ಮೊದಲಿಗೆ ದೆಹಲಿ, ಚೆನ್ನೈ ಮತ್ತು ಕೊಲ್ಕತ್ತಾಕ್ಕೆ ಡ್ರಗ್ಸ್ ಬಂದಿಳಿಯುತ್ತೆ. ಅಲ್ಲಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಇಂಟರ್‌ನ್ಯಾಷನಲ್ ಪೋಸ್ಟ್ ಆಫೀಸ್‌ಗೆ ಬರಲಿದೆ. ಬುಕ್ ಮಾಡುವಾಗಲೇ ಸುಳ್ಳು ವಿಳಾಸ ಕೊಟ್ಟು ಆ ವಿಳಾಸಕ್ಕೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂಬುದು ತಿಳಿದುಬಂದಿದೆ.
ಚಾಮರಾಜಪೇಟೆಯ ಇಂಟರ್ ನ್ಯಾಷನಲ್ ಪೋಸ್ಟ್ ಆಫೀಸ್‌ಗೆ ಹೇಮಂತ್ ಮತ್ತು ಸುಜಯ್ ಇಬ್ಬರೂ ಎರಡು-ಮೂರು ಬಾರಿ ಬಂದು ಪಾರ್ಸೆಲ್ ಬಗ್ಗೆ ವಿಚಾರಿಸಿದ್ದರು. ಹೇಮಂತ್‌ನ ಹೊನ್ನಪ್ಪ, ಪ್ರೊಟೀನ್ ಕಂಪನಿಗೆ ವಿದೇಶದಿಂದ ಪ್ರೊಟೀನ್‌ನನ್ನು ತರಿಸುತ್ತಿದ್ದ ಮಾದರಿಯಲ್ಲೇ ಡ್ರಗ್ಸ್ ತರಿಸುತ್ತಿದ್ದರು. ಎರಡು-ಮೂರು ಬಾರಿ ಪೋಸ್ಟ್ ಆಫೀಸ್‌ನಲ್ಲಿ ಪ್ರಶ್ನಿಸಿದಾಗ ಪೋಸ್ಟ್ ಆಫೀಸ್ ಸಿಬ್ಬಂದಿ ಮೂಲಕ ಸಿಸಿಬಿ ಮಾಹಿತಿ ಪಡೆದು ಮೊದಲಿಗೆ ಸುಜಯ್‌ನನ್ನು ಬಂಧನ ಮಾಡಿತ್ತು.
ಸುಜಯ್ ಬಂಧನ ಬಳಿಕ ಉಳಿದ ಆರೋಪಿಗಳು ಗೋವಾಗೆ ಎಸ್ಕೇಪ್ ಆಗಿದ್ದರು. ಗೋವಾದ ಐಷಾರಾಮಿ ತಾಜ್ ಹೋಟೆಲ್‌ನಲ್ಲಿ ಒಂದು ದಿನಕ್ಕೆ 80 ಸಾವಿರ ಹಣ ನೀಡಿ ಒಂದು ವಿಲ್ಲಾ ಬುಕ್ ಮಾಡಿಕೊಂಡು ಆರೋಪಿಗಳು ತಂಗಿದ್ದರು. ಸಿಸಿಬಿ ಮತ್ತು ಕೆಂಪೇಗೌಡ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.