ಬೆಂಗಳೂರು: ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಸದ್ಯದಲ್ಲೇ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರಲಿದೆ. ಉದ್ದೇಶಿತ ಸುಗ್ರೀವಾಜ್ಞೆಯಲ್ಲಿ ಕಾನೂನು ತೊಡಕಾಗದಂತೆ ಅಗತ್ಯ ಸಂವಿಧಾನಾತ್ಮಕ ಅಂಶಗಳನ್ನು ಸೇರ್ಪಡೆಗೊಳಿಸಲು ಸರ್ಕಾರ ಮುಂದಾಗಿದೆ. ಅಷ್ಟಕ್ಕೂ ಸುಗ್ರೀವಾಜ್ಞೆಯಲ್ಲಿ ಏನೆಲ್ಲ ಅಂಶಗಳನ್ನು ಸೇರಿಸಲಿದೆ ಎಂಬ ವರದಿ ಇಲ್ಲಿದೆ.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೊರೆ ಹೋಗಿದೆ. ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಎಸ್ಸಿಗೆ ಶೇ. 17 ಹಾಗೂ ಎಸ್ಟಿಗೆ ಶೇ. 7 ಮೀಸಲಾತಿ ಹೆಚ್ಚಿಸುವ ತೀರ್ಮಾನ ಜಾರಿಗೆ ತರಲು ಸಿದ್ಧವಾಗಿದೆ. ಆ ಮೂಲಕ ರಾಜ್ಯದ ಒಟ್ಟು ಮೀಸಲಾತಿ ಶೇ.56ಕ್ಕೆ ತಲುಪಲಿದೆ. ಈ ಮುಂಚೆ ಆಡಳಿತಾತ್ಮಕ ಆದೇಶದ ಮೂಲಕ ಮೀಸಲಾತಿ ಹೆಚ್ಚಳವನ್ನು ಜಾರಿಗೆ ತರಲು ಉದ್ದೇಶಿಸಿತ್ತು. ಆದರೆ, ಮೀಸಲಾತಿ ಹೆಚ್ಚಳ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದ್ದು, ಮುಂದೆ ಸಮಸ್ಯೆ ಎದುರಾಗದಂತೆ ಸುಗ್ರೀವಾಜ್ಞೆ ತರಲು ನಿರ್ಧರಿಸಿದೆ.
ಸುಗ್ರೀವಾಜ್ಞೆಯಲ್ಲಿ ಹಲವು ಅಂಶಗಳ ಸೇರ್ಪಡೆ: ಸದ್ಯ ಕಾನೂನು ಇಲಾಖೆ ವಿಸ್ತೃತ ಸುಗ್ರೀವಾಜ್ಞೆ ರೂಪಿಸುತ್ತಿದ್ದು, ಇದರಲ್ಲಿ ಮೀಸಲಾತಿ ಹೆಚ್ಚಳದ ಅನಿವಾರ್ಯತೆಯ ಬಗ್ಗೆ ಸಂವಿಧಾನದ ವಿವಿಧ ವಿಧಿಗಳನ್ನು ಉಲ್ಲೇಖಿಸಲಾಗುವುದು ಎಂದು ಹೇಳಲಾಗಿದೆ.
ಪ್ರಮುಖವಾಗಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಂಖ್ಯೆ 6ರಿಂದ ಈಗ 103ಗೆ ಹೆಚ್ಚಾಗಿರುವ ಬಗ್ಗೆ ಹಾಗೂ ಪರಿಶಿಷ್ಟ ಪಂಗಡದಲ್ಲಿ 2-3 ಇದ್ದ ಜಾತಿ ಈಗ 56ಕ್ಕೆ ಏರಿಕೆಯಾಗಿರುವ ಬಗ್ಗೆ ಸುಗ್ರೀವಾಜ್ಞೆಯಲ್ಲಿ ಉಲ್ಲೇಖವಿರಲಿದೆ. ಪರಿಶಿಷ್ಟರ ಜನಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಅಗತ್ಯಕ್ಕನುಸಾರವಾಗಿ ಮೀಸಲಾತಿ ನೀಡಲಾಗುತ್ತಿದೆ ಎಂಬ ಅಂಶವನ್ನು ಅಂಕಿ- ಅಂಶದ ಜೊತೆಗೆ ಉಲ್ಲೇಖಿಸಲಿದೆ ಎಂದು ಕಾನೂನು ಇಲಾಖೆ ಮೂಲಗಳು ತಿಳಿಸಿವೆ.
ಸಂವಿಧಾನದ IVನೇ ಭಾಗದಲ್ಲಿ ಕೊಡಮಾಡಿರುವ ಆರ್ಥಿಕ ಹಾಗೂ ಸಾಮಾಜಿಕವಾಗಿ ನಾಗರೀಕರು ಉತ್ತಮ ಜೀವನ ನಡೆಸುವಾಗಿನ ರಾಜ್ಯ ನಿರ್ದೇಶಕ ತತ್ವಗಳ ಆಧಾರದ ಮೇಲೆ ಸುಗ್ರೀವಾಜ್ಞೆಯನ್ನು ಹೊರಡಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ಪರಿಚ್ಛೇದ 38, 39 ಮತ್ತು 46ರ ಅಂಶಗಳನ್ನು ಸೇರಿಸಿ ಸುಗ್ರೀವಾಜ್ಞೆ ಕಾಯ್ದೆ ಹೊರಡಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ. ಇದರಿಂದ 31Cಯಡಿ ಸುಗ್ರೀವಾಜ್ಞೆ ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ಸಿಗಲಿದೆ.
ಪರಿಗಣಿಸಲ್ಪಡಬಹುದಾದ ಸಂವಿಧಾನಿಕ ವಿಧಿ: ವಿಧಿ 38: ಇದರಡಿ ರಾಜ್ಯ ಸರ್ಕಾರ ತನ್ನ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ನ್ಯಾಯ ನೀಡುವ ಸಲುವಾಗಿ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಬಾಧ್ಯತೆ ಹೊಂದಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸುವ ವ್ಯವಸ್ಥೆಯನ್ನು ರೂಪಿಸುವುದರ ಜೊತೆಗೆ ಅದರ ರಕ್ಷಣೆಗೆ ಆದ್ಯತೆ ನೀಡುವ ಅಂಶವನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಧಿ 39: ಇದರಡಿ ರಾಜ್ಯ ಸರ್ಕಾರ ಭೌತಿಕ, ಆರ್ಥಿಕ ಸಂಪನ್ಮೂಲಗಳನ್ನು ರಕ್ಷಿಸಿ, ಅದನ್ನು ಜನರ ಕಲ್ಯಾಣಕ್ಕಾಗಿ ಸಮಾನವಾಗಿ ಹಂಚುವ ಜವಾಬ್ದಾರಿ ಹೊಂದಿದೆ. ಈ ಅಂಶವನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಧಿ 46: ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗ ಮತ್ತು ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ, ಆರ್ಥಿಕ ಹಿತಾಸಕ್ತಿ ಕಾಪಾಡುವ ಹೊಣೆಗಾರಿಕೆ ಹೊಂದಿದೆ. ಈ ಅಂಶವನ್ನೂ ಸೇರಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.
ತಮಿಳುನಾಡು ಸರ್ಕಾರ ತನ್ನ ರಾಜ್ಯದಲ್ಲಿನ ಶೇ. 69ರಷ್ಟು ಮೀಸಲಾತಿ ಹೆಚ್ಚಳಕ್ಕಾಗಿ ರೂಪಿಸಿರುವ ಕಾಯ್ದೆ, ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ನೀಡಿರುವ ಶೇ. 10ರ ಮೀಸಲಾತಿ ಕಾಯ್ದೆಯಲ್ಲಿ ಅನುಸರಿಸಿದ ಪ್ರಕ್ರಿಯೆಯನ್ನೇ ಇಲ್ಲೂ ಅನುಸರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 'ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರ್ಬೇಕು ಎಂಬ ಹೋರಾಟ ಹಳೆಯದು'