ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಪ್ರಕರಣದ ವಿಚಾರವಾಗಿ ನಾನು ಸಿಎಂ ಭೇಟಿಯಾಗಿಲ್ಲ. ಈಗಾಗಲೇ ಒಂದು ದೂರು ಕಬ್ಬನ್ ಪಾರ್ಕ್ ಸ್ಟೇಷನ್‌ನಲ್ಲಿ ದಾಖಲಾಗಿದೆ. ಈ ಬಗ್ಗೆ ವಿಸ್ತೃತ ತನಿಖೆ ಮಾಡಲಿದ್ದೇವೆ ಎಂದರು.
ಓದಿ: ಸಿಎಂ ಸಚಿವರ ರಾಜೀನಾಮೆ ಪಡೆಯಲಿ: ಧ್ರುವ ನಾರಾಯಣ್
ಈ ವಿಚಾರದಲ್ಲಿ ಪಕ್ಷದ ನಿಲುವು, ಹಿರಿಯರ ನಿಲುವು ಅವರೇ ಪ್ರಕಟ ಮಾಡುತ್ತಾರೆ. ಅದರ ಬಗ್ಗೆ ಮಾತನಾಡುವ ಅಧಿಕಾರ ನನಗಿಲ್ಲ. ಇದೆಲ್ಲವೂ ನಮ್ಮ ಗಮನದಲ್ಲಿದೆ. ಪಕ್ಷ ಮತ್ತು ಹಿರಿಯರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ತನಿಖೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದರು.