ಬೆಂಗಳೂರು: ದಿನೇ ದಿನೆ ನಗರದಲ್ಲಿ ಹಸಿರು ಮಾಯವಾಗಿ ಬರೀ ಕಲ್ಲಿನ ಕಟ್ಟಡಗಳೇ ಕಾಣ ಸಿಗುತ್ತಿವೆ. ಆದ್ರೀಗ, ಗಿಡ- ಮರ ಉಳಿಸಿ ಅಂತ ಜನರಿಗೆ ಪಾಠ ಹೇಳುವ ಸರ್ಕಾರವೇ ಹಸಿರ ಒಡಲಿಗೆ ಕತ್ತರಿ ಹಾಕುವ ಕೆಲಸಕ್ಕೆ ಮುಂದಾಗುತ್ತಿದೆ. ಸಣ್ಣ ಸಣ್ಣ ಅರಣ್ಯವನ್ನ, ಉದ್ಯಾನವನ್ನಾಗಿ ಮಾಡಲು ಹೊರಟಿರುವ ಸರ್ಕಾರದ ಮತಿಗೇಡುತನಕ್ಕೆ ಪರಿಸರ ಪ್ರೇಮಿಗಳು ಛೀಮಾರಿ ಹಾಕುತ್ತಿದ್ದಾರೆ.
ನಗರದ ತಲ್ಲಘಟ್ಟಪುರ ಬಳಿ ಇರುವ ತುರಹಳ್ಳಿ ಅರಣ್ಯಪ್ರದೇಶವನ್ನು ಕಡಿದು ಮರಗಳ ಉದ್ಯಾನ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಲ್ಲಿನ ಸ್ಥಳೀಯ ನಿವಾಸಿಗಳು, ಟ್ವಿಟರ್ ಮೂಲಕ ತುರಹಳ್ಳಿ ಅರಣ್ಯ ಪ್ರದೇಶ ಉಳಿಸಿ ಅಂತ ಅಭಿಯಾನ ಮಾಡುತ್ತಿದ್ದಾರೆ. ನಿನ್ನೆಯಿಂದ ಅರಣ್ಯದೊಳಗೆ ಬುಲ್ಡೂಜರ್ ಗಳು ಇಳಿದಿದ್ದು, ತುರಹಳ್ಳಿಯಲ್ಲಿ ಪಕ್ಷಿ ವೀಕ್ಷಣೆಗೆ ಬಂದ ಪ್ರತಿಯೊಬ್ಬರು ಇದೀಗ ವಾಹನದ ಎದುರು ನಿಂತು ಕಾಮಗಾರಿ ನಿಲ್ಲಿಸಬೇಕು ಅಂತ ಒತ್ತಾಯಿಸಿದ್ದಾರೆ.
ಓದಿ: ರಾಜ್ಯದಲ್ಲಿ ಮುಂದಿನ ಐದು ದಿನ ಒಣ ಹವೆ: ಸಿ.ಎಸ್. ಪಾಟೀಲ್ ಮುನ್ಸೂಚನೆ
ಟೀ ಪಾರ್ಕ್ ನಿರ್ಮಾಣ ಮಾಡೋದಾಗಿ ರಾಜ್ಯದ ಮುಖ್ಯಮಂತ್ರಿಗಳು ತಿಳಿಸಿದ್ದು, ಈಗಾಗಲೇ ಇದಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿರುವುದರಿಂದ ಕಾಮಗಾರಿ ಶುರುವಾಗಿದೆ. ಈ ಕುರಿತು ನಮ್ಮ ಜನಾಭಿಪ್ರಾಯ ಕೇಳುವವರೇ ಇಲ್ಲ ಅಂತ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಅರಣ್ಯದಲ್ಲಿ ನವಿಲು ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿ - ಪಕ್ಷಿಗಳು ವಾಸವಿದ್ದು, ಕಾಮಗಾರಿ ನೆಪದಲ್ಲಿ ಇವುಗಳ ಮರಣಕ್ಕೆ ಕಾರಣವಾಗದರಲಿ ಅನ್ನೋದು ಪರಿಸರ ಪ್ರೇಮಿಗಳ ಆಶಯವಾಗಿದೆ.