ಬೆಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಆಡಳಿತಾತ್ಮಕ ವರದಿಯನ್ನು ಮಂಡನೆ ಮಾಡಲು ಉಪಮೇಯರ್ ಭದ್ರೇಗೌಡ ನಿರ್ಧರಿಸಿದ್ದು, ಸೆ.18ರಂದು ಪಾಲಿಕೆ ಸಭೆಯಲ್ಲಿ ಪ್ರಸಕ್ತ ಸಾಲಿನ ಆಡಳಿತಾತ್ಮಕ ವರದಿ ಮಂಡನೆ ಮಾಡಲಿದ್ದಾರೆ.
ಭದ್ರೇಗೌಡ ಅವರು ಮೇಯರ್ ಗಂಗಾಂಬಿಕೆ ಅವರಿಗೆ ಪತ್ರ ಬರೆದು ಆಡಳಿತ ವರದಿ ಮಂಡನೆಗೆ ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಮೇಯರ್ ಮೌಖಿಕವಾಗಿ ಅನುಮತಿ ನೀಡಿದ್ದರೂ ದಿನಾಂಕ ನಿಗದಿಪಡಿಸುವಲ್ಲಿ ವಿಫಲರಾಗಿದ್ದರು. ಬಳಿಕ ಆಡಳಿತ ವರದಿ ಮಂಡನೆಗೆ ಅವಕಾಶ ನೀಡುವಂತೆ ಕೌನ್ಸಿಲ್ ಕಾರ್ಯದರ್ಶಿ ಪಲ್ಲವಿ ಅವರಿಗೆ ಸೂಚನೆ ನೀಡಲಾಗಿತ್ತು. ಈ ವೇಳೆ ಕೆಲವರು ಯಾವುದೇ ಕಾರಣಕ್ಕೂ ಆಡಳಿತ ವರದಿ ಮಂಡನೆಗೆ ಅವಕಾಶ ನೀಡದಂತೆ ಕೌನ್ಸಿಲ್ ಕಾರ್ಯದರ್ಶಿಗಳ ಮೇಲೆ ಒತ್ತಡ ತಂದಿದ್ದರು.
ಈ ಒತ್ತಡಕ್ಕೆ ಮಣಿದು ಕೌನ್ಸಿಲ್ ಕಾರ್ಯದರ್ಶಿಯವರು ಮೇಯರ್ ಅವಧಿ ಪೂರ್ಣಗೊಳ್ಳುವ ಕೊನೆ ತಿಂಗಳಿನಲ್ಲಿ ಉಪಮೇಯರ್ ಆಡಳಿತ ವರದಿ ಮಂಡಿಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಕಾನೂನು ಸಲಹೆ ಪಡೆಯಲು ಮುಂದಾದರು. ಪಾಲಿಕೆ ಕಾನೂನು ಮುಖ್ಯಸ್ಥರಾದ ದೇಶಪಾಂಡೆ ಅವರು ಹೊಸ ಮೇಯರ್ ಆಯ್ಕೆಗೆ ಚುನಾವಣೆ ಘೋಷಣೆಯಾದರೂ ಹಾಲಿ ಉಪಮೇಯರ್ ಅವರು ಆಡಳಿತ ವರದಿ ಮಂಡನೆ ಮಾಡಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇಷ್ಟೆಲ್ಲ ಅಡೆತಡೆಗಳನ್ನು ಎದುರಿಸಿದ ಉಪಮೇಯರ್ ಭದ್ರೇಗೌಡ ಸೆ.18ರಂದು ಪ್ರಸಕ್ತ ಸಾಲಿನ ಆಡಳಿತಾತ್ಮಕ ವರದಿ ಮಂಡನೆ ಮಾಡಲು ತೀರ್ಮಾನಿಸಿದ್ದಾರೆ.