ಬೆಂಗಳೂರು: ಖಾತೆ ಬದಲಾವಣೆ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದ್ದು, ಶ್ರೀರಾಮುಲುಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಆದರೆ, ಅವರ ಬಳಿ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯನ್ನು ವಾಪಸ್ ಪಡೆಯಲಾಗಿದೆ.
ಈ ಸಂಬಂಧ ರಾಜ್ಯಪಾಲ ವಜುಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ. ಡಾ. ಕೆ. ಸುಧಾಕರ್ಗೆ ಹಾಲಿ ಇರುವ ವೈದ್ಯಕೀಯ ಶಿಕ್ಷಣ ಖಾತೆಯ ಜೊತೆಗೆ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆಯ ಜವಾಬ್ದಾರಿಯನ್ನು ಸಹ ನೀಡಲಾಗಿದೆ.
ಬಿ. ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ವಾಪಸ್ ಪಡೆದು ಸಿಎಂ ಬಿಎಸ್ವೈ ತಮ್ಮ ಬಳಿಯೇ ಉಳಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಶ್ರೀರಾಮುಲುಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿ ಎರಡೂ ಖಾತೆಯ ಜವಾಬ್ದಾರಿಯನ್ನು ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಅಧಿಕೃತ ಆದೇಶದಲ್ಲಿ ರಾಮುಲುಗೆ ಸಮಾಜ ಕಲ್ಯಾಣದ ಇಲಾಖೆಯನ್ನು ಮಾತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀರಾಮುಲು ಅವರಿಗೆ ಇನ್ನೊಂದು ಖಾತೆಯನ್ನು ನೀಡಲಾಗುತ್ತದೆ ಎಂದು ಹೇಳಲಾಗ್ತಿದೆ. ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನು ಮುಂದುವರಿಸಲಾಗಿದೆ.