ಬೆಂಗಳೂರು: ನಗರದಾದ್ಯಂತ ದಟ್ಟ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಕೆಲ ಪ್ರದೇಶದಲ್ಲಿ ತುಂತುರು ಮಳೆ ಆರಂಭವಾಗಿದೆ. ಮುಂದಿನ ಎರಡು ದಿನ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ಮಾತನಾಡಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ಕರಾವಳಿಯಲ್ಲಿ ಒಣ ಹವೆ ಮುಂದುವರೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 35 ಮಿ.ಮೀ, ಶಿರಾದಲ್ಲಿ 34 ಮಿ.ಮೀ ಮಳೆ ದಾಖಲಾಗಿದೆ. ಕಲಬುರ್ಗಿಯಲ್ಲಿ ಗರಿಷ್ಠ ಉಷ್ಣಾಂಶ 40.5, ಬೀದರ್ 38.2, ರಾಯಚೂರು 39, ವಿಜಯಾಪುರ 38.5, ಗದಗ 36.2 , ಬೆಂಗಳೂರಿಲ್ಲಿ 34.6 ದಾಖಲಾಗಿದೆ ಎಂದಿದ್ದಾರೆ.
ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಏ. 20 ರಿಂದ 24ರ ವರೆಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಉತ್ತರ ಒಳನಾಡಿನಲ್ಲಿ ಏ. 20,21, 24 ರಂದು ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಏ 22,23 ರಂದು ಉತ್ತರ ಒಳನಾಡಿನ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಓದಿ: ನಾಳೆಯಿಂದ ಚಿತ್ರಮಂದಿರಗಳನ್ನ ಬಂದ್ ಮಾಡುತ್ತೇವೆ : ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್