ಬೆಂಗಳೂರು :ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಪಕ್ಷನಾಯಕ ಸಿದ್ದರಾಮಯ್ಯ ಇಂದು ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಪರಮೇಶ್ವರ ನಾಯಕ, ರಿಜ್ವಾನ್, ಮಾಜಿ ಶಾಸಕ ಅಶೋಕ್ ಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.
ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮದು ವೈವಿಧ್ಯತೆಯ ದೇಶ. ಸಾಮಾಜಿಕವಾಗಿ ಎಲ್ಲರಿಗೂ ಒಂದೇ ಮೌಲ್ಯ ಸಿಗಬೇಕು. ಆರ್ಥಿಕ, ಸಾಮಾಜಿಕ ಪ್ರಭುತ್ವ ಸಿಗಬೇಕು. ಸಮಾಜದಲ್ಲಿ ಸಮಾನತೆ ಮುಖ್ಯ. ಆದರೆ ಇಂದು ರಾಷ್ಟ್ರ ಧರ್ಮಾಧಾರಿತವಾಗ್ತಿದೆ. ಕೋಮುವಾದಿತನದಿಂದ ಪ್ರಜಾಪ್ರಭುತ್ವ ನಾಶವಾಗ್ತಿದೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಇದಕ್ಕಾಗಿ ಮತ್ತೆ ನಾವು ಹೋರಾಟ ಮಾಡಬೇಕಿದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕಿದೆ. ಆಗ ಮಾತ್ರ ನಮಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.
ಬಿಜೆಪಿಯಿಂದ ದ್ವೇಷದ ರಾಜಕಾರಣ : ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಿನ್ನೆಯ ಜಾಹೀರಾತಿನಲ್ಲಿ ನೆಹರು ಅವರ ಭಾವಚಿತ್ರ ತೆಗೆದು ಹಾಕಿದ್ದಾರೆ. ಅಂಬೇಡ್ಕರ್ ಅವರನ್ನು ಕೊನೆಯಲ್ಲಿ ಹಾಕಿದ್ದಾರೆ. ಸಾವರ್ಕರ್ ಅವರನ್ನು ಮೊದಲಿಗೆ ಹಾಕಿದ್ದಾರೆ. ಆರ್ ಎಸ್ ಎಸ್ ಕಪಿಮುಷ್ಠಿಯಲ್ಲಿ ಈ ಸರ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಇದೇ ಸಾವರ್ಕರ್ ಬ್ರಿಟಿಷರಿಗೆ ನಾವು ಸಹಕರಿಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಇವತ್ತು ಸಂದಿಗ್ಧತೆ ದೇಶದಲ್ಲಿದೆ. ಇವತ್ತು ಮತ್ತೊಮ್ಮೆ ಹೋರಾಟ ಅನಿವಾರ್ಯವಾಗಿದೆ. ಆ ಧಿಕ್ಕಿನಲ್ಲಿ ನಾವೆಲ್ಲರೂ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.
ನೆಹರು ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ನೆಹರು ಅವರ ಕೊಡುಗೆಯಿದೆ. ನೆಹರು ಜೈಲು ವಾಸ ಅನುಭವಿಸಿದ್ದರು. ಇದು ನೆಹರು ಅಲ್ಲ, ಭಾರತೀಯರಿಗೆ ಮಾಡಿದ ಅವಮಾನ. ನೆಹರು ಆಧುನಿಕ ಭಾರತ ಕಟ್ಟಲು ಪ್ರಯತ್ನಿಸಿದವರು ಎಂದರು.
ಬಿಜೆಪಿಯವರಿಗೆ ನೆಹರು ಇತಿಹಾಸ ಗೊತ್ತಿದ್ಯಾ? ಜಿನ್ನಾ ಮುಸ್ಲೀಂ ಲೀಗ್ ಮಾಡಿರಲಿಲ್ವೇ? ನೆಹರು ದೇಶ ಒಡೆಯಲು ಹೇಗೆ ಕಾರಣ ಆಗ್ತಾರೆ. ಜನರಿಗೆ ತಪ್ಪು ಮಾಹಿತಿ ನೀಡಬಾರದು. ಇತಿಹಾಸ ಗೊತ್ತಿಲ್ಲದಿದ್ದರೆ ಇತಿಹಾಸವನ್ನು ತಿಳಿಯುವ ಕೆಲಸ ಮಾಡಬೇಕು. ಇದರಲ್ಲಿ ಆರ್ ಎಸ್ ಎಸ್ ಹಿಡನ್ ಅಜೆಂಡಾ ಇದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : 20 ಟನ್ ತಾಜಾ ತರಕಾರಿಯಲ್ಲಿ ಅರಳಿತು ತ್ರಿವರ್ಣ ಧ್ವಜ.. ಆಹಾರೋತ್ಪನ್ನದಲ್ಲಿ ಭಾರತದ ಪ್ರಗತಿ