ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಮಾನ್ಯತೆ ಕೊಡದೇ ಇದ್ದರೆ ನಾವು ಕೂಡ ಪಂಚಮಸಾಲಿಗರು ಮಾಡುತ್ತಿರುವ ಹೋರಾಟಕ್ಕಿಂತ ದೊಡ್ಡದಾಗಿ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಬೃಹತ್ ಜಾಥಾ ಮಾಡೋಣ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಕರೆ ನೀಡಿದ್ದಾರೆ.
ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಾಯಕರಾದ ಯಡಿಯೂರಪ್ಪಗೆ ಕೊಡುತ್ತಿರುವ ಹಿಂಸೆ ನೋಡಿದ್ರೆ ಯಾರಿಗಾದರೂ ಅಯ್ಯೋ ಎನಿಸುತ್ತದೆ ಎಂದರು.
ಹಿಂಸೆ ನಡುವೆಯೂ ಉತ್ತಮ ಆಡಳಿತ:
ಒಂದು ಕಡೆ ಕುರುಬರು, ಮತ್ತೊಂದು ಕಡೆ ವಾಲ್ಮೀಕಿಗಳು, ಇನ್ನೊಂದೆಡೆ ನಾವು ಕೂಡ ಅವರಿಗೆ ಹಿಂಸೆ ನೀಡುತ್ತಿದ್ದೇವೆ. ಅವರು ಅಂತಹ ಹಿಂಸೆಯ ನಡುವೆಯೂ ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದಾರೆ. ಕೊರೊನಾ ಸಂಕಷ್ಟದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಕುಸಿದಿದೆ. ಇಂತಹ ಸಂಕಷ್ಟದಲ್ಲಿ ಬಜೆಟ್ ಮಂಡನೆಯ ಸವಾಲು ಕೂಡ ಅವರ ಮೇಲಿದೆ. ಆದರೂ ಫೆಬ್ರವರಿ 18-19 ರಂದು ಪ್ರಮುಖ ಮಠಾಧೀಶರ ನಿಯೋಗವನ್ನು ಭೇಟಿ ಮಾಡಿ ಮನವಿ ಸ್ವೀಕರಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ ಎಂದರು.
ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಿರೋಧವಿಲ್ಲ:
ಲಿಂಗಾಯತ ಅಭಿವೃದ್ದಿ ಮಂಡಳಿ ಅಧ್ಯಕ್ಷನಾಗಿ ನಾನು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾನೂ ಕೂಡ ಪಂಚಮಸಾಲಿ ಸಮಾಜಕ್ಕೆ ಸೇರಿದವನೇ. ಹಾಗಾಗಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ನಾನು ವಿರೋಧಿಸುವುದಿಲ್ಲ, ಬದಲಾಗಿ ಸ್ವಾಗತಿಸುತ್ತೇನೆ.
ಸಮುದಾಯದ ಎಲ್ಲ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಿ:
ವೀರಶೈವ ಲಿಂಗಾಯತರ 106 ಒಳಪಂಗಡಗಳಿಗೆ ಒಬಿಸಿ ಮಾನ್ಯತೆ ನೀಡಿದ್ದಾರೆ. ಹಾಗಾದರೆ ಉಳಿದವರ ಕಥೆ ಏನು? ನಾವು ಕೇಳಬೇಕು. ಕೇಳದೇ ಇದ್ದರೆ ಸರ್ಕಾರ ಕೊಡಲ್ಲ. ಹಾಗಾಗಿ ವೀರಶೈವ ಲಿಂಗಾಯತರ ಎಲ್ಲಾ ಒಳಪಂಗಡಗಳನ್ನು ಒಬಿಸಿಗೆ ಸೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಎಲ್ಲ ಪಂಚಪೀಠಾಧೀಶ್ವರರು ಹಾಗೂ ವಿರಕ್ತ ಮಠಗಳ ಪೀಠಾಧೀಶ್ವರರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಎಲ್ಲರೂ ಒಂದೇ ಎಂದು ತೋರಿಸಲು ಈ ಸಭೆ ಸೇರಿಸಿದ್ದೇವೆ ಎಂದರು.
ಈ ಸುದ್ದಿಯನ್ನೂ ಓದಿ: ಒಬಿಸಿ ಮೀಸಲಿಗೆ ಆಗ್ರಹಿಸಿ ಮಠಾಧೀಶರ ಸಭೆ ಆರಂಭ
ಒಬಿಸಿಗೆ ಸೇರ್ಪಡೆಯಾದರೆ ಸಮುದಾಯಕ್ಕೆ ಅನುಕೂಲವಾಗಲಿದೆ. ಮೊಟ್ಟ ಮೊದಲು 3ಬಿಗೆ ಹೋರಾಟ ಮಾಡಿದ್ದು ಕೂಡ ನಾವೇ. 3ಬಿ ಯಿಂದ ಅನುಕೂಲ ಆಗಿದೆ ಆದರೂ ಒಬಿಸಿಗೆ ಸೇರಿಸಿದರೆ ಇನ್ನಷ್ಟು ಅನುಕೂಲ ಆಗಲಿದೆ. ನಮ್ಮ ಬೇಡಿಕೆಗೆ ಕೇಂದ್ರ ಮಾನ್ಯತೆ ಕೊಡದೇ ಇದ್ದರೆ ನಾವು ಕೂಡ ಪಂಚಮಸಾಲಿಗರು ಮಾಡುತ್ತಿರುವುದಕ್ಕಿಂತ ದೊಡ್ಡದಾಗಿ ಬಸವಕಲ್ಯಾಣದಿಂದ ಬೃಹತ್ ಜಾಥಾ ಮಾಡೋಣ ಎಂದರು.