ಬೆಂಗಳೂರು : ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಪರಾರಿಯಾಗಿದ್ದ ಇಬ್ಬರು ಡಿಲವರಿ ಬಾಯ್ಸ್ ಅನ್ನು ಕೇಂದ್ರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಸವರಾಜ ಹಾಗೂ ಮಾಳಪ್ಪ ಬಂಧಿತ ಆರೋಪಿಗಳು. ಬಂಧಿತರಿಂದ 6.5 ಲಕ್ಷ ಮೌಲ್ಯದ 6 ಐಫೋನ್, 2 ಆ್ಯಪಲ್ ವಾಚ್, ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್, 4 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಸ್ಲೀಂ ಆರೀಫ್ ಎಂಬುವವರು ರವಾನಿಸಿದ್ದ ಆರು ಐಫೋನ್ ಹಾಗೂ ಆ್ಯಪಲ್ ವಾಚ್ ಸಮೇತ ಆರೋಪಿಗಳು ಪರಾರಿಯಾಗಿದ್ದರು. ನಕಲಿ ದಾಖಲಾತಿ, ಆಧಾರ್ ಕಾರ್ಡುಗಳನ್ನು ನೀಡಿ ಬೇರೆ ಬೇರೆ ಹೆಸರುಗಳಲ್ಲಿ ಡಂಜೋದಲ್ಲಿ ಕೆಲಸ ಗಿಟ್ಟಿಸಿದ್ದ ಆರೋಪಿಗಳು, ಗ್ರಾಹಕರು ರವಾನಿಸುವ ದುಬಾರಿ ವಸ್ತುಗಳನ್ನು ಡಿಲವರಿ ನೀಡದೇ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಾರ್ಚ್ 5ರಂದು ಸುಣಕಲ್ ಪೇಟೆಯ ಅಂಗಡಿಯೊಂದರಲ್ಲಿ ಆರು ಐಫೋನ್‌ಗಳು ಹಾಗೂ ಒಂದು ಆ್ಯಪಲ್ ವಾಚ್ ಖರೀದಿಸಿದ್ದ ತಸ್ಲೀಂ ಎಂಬುವವರು ವಿಜಯನಗರದ ತಮ್ಮ ಅಂಗಡಿ ವಿಳಾಸಕ್ಕೆ ತಲುಪಿಸಲು ಡಂಜೋ ಡಿಲವರಿ ಆಯ್ಕೆಯ ಮೊರೆಹೋಗಿದ್ದರು. ಅರುಣ್ ಪಾಟೀಲ್ ಎಂಬ ಹೆಸರಿನಲ್ಲಿ ಆರೋಪಿ ಪಾರ್ಸೆಲ್ ಪಡೆದಿದ್ದ.
ಕೆಲ ಸಮಯದ ಬಳಿಕ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ತನಗೆ ಪಾರ್ಸಲ್ ಹಸ್ತಾಂತರಿಸಿದ್ದು, ಶೀಘ್ರದಲ್ಲೇ ನಿಮ್ಮ ವಿಳಾಸಕ್ಕೆ ಡಿಲವರಿ ಕೊಡಲಾಗುವುದು ಎಂದು ನಯನ್ ಎಂಬ ಹೆಸರಿನಲ್ಲಿ ಮತ್ತೋರ್ವ ಆರೋಪಿ ತಸ್ಲೀಂಗೆ ಕರೆ ಮಾಡಿ ತಿಳಿಸಿದ್ದ. ಆದರೆ ಇಬ್ಬರೂ ತಮ್ಮಲ್ಲಿದ್ದ ಪಾರ್ಸಲ್ನ್ನು ವಿಳಾಸಕ್ಕೆ ತಲುಪಿಸದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಸದ್ಯ ತಸ್ಲೀಂ ಎಂಬವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕೇಂದ್ರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಸ್ಪಿ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕೋಟಿ ವಂಚನೆ : ಎಸ್ಪಿ ಸೋಗಿನಲ್ಲಿ ವ್ಯಕ್ತಿಯೊಬ್ಬರಿಂದ ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ತನ್ನನ್ನು ಎಸ್ಪಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೋರ್ವ 1.75 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಎಸ್ಪಿ ಶ್ರೀನಿವಾಸ್ ವಿರುದ್ಧ ವಂಚನೆಗೊಳಗಾದ ವೆಂಕಟನಾರಾಯಣ ಎಂಬುವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ ವೆಂಕಟನಾರಾಯಣ ಎಂಬವರಿಗೆ 2022ರಲ್ಲಿ ಶ್ರೀನಿವಾಸ್ ಎಂಬವರ ಪರಿಚಯವಾಗಿತ್ತು. ಈ ವೇಳೆ ಶ್ರೀನಿವಾಸ್ ತನ್ನನ್ನು ತಾನು ಬೆಂಗಳೂರಿನ ದಕ್ಷಿಣ ವಿಭಾಗದ ಎಸ್ಪಿ ಎಂದು ಪರಿಚಯಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಐಪಿಎಸ್ ಅಧಿಕಾರಿ ಎಂಬ ಕಾರಣಕ್ಕೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವೇಳೆ ಆರೋಪಿ ತಾನು ಮೈಸೂರಿನಲ್ಲಿ ಲ್ಯಾಂಡ್ ಲಿಟಿಗೇಷನ್ನ್ನು ನಿರ್ವಹಣೆ ಮಾಡುತ್ತಿದ್ದೇನೆ. ಈ ಸಂಬಂಧ 2.5 ಕೋಟಿ ಹಣ ಬೇಕು ಎಂದು ವೆಂಕಟನಾರಾಯಣ ಬಳಿ ಕೇಳಿದ್ದರಂತೆ. ಇದನ್ನು ನಂಬಿದ ವೆಂಕಟನಾರಾಯಣ ಹಂತ ಹಂತವಾಗಿ ಹಣ ನೀಡಿದ್ದಾರೆ. ಬಳಿಕ ನಕಲಿ ಅಧಿಕಾರಿ ಶ್ರೀನಿವಾಸ್ ಮೊಬೈಲ್ ಹಣ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಡೆಲಿವರಿ ಬಾಯ್ಸ್ ಪರಾರಿ