ಬೆಂಗಳೂರು: ರಾಜಧಾನಿ ಬೆಂಗಳೂರಿನ ಈಜಿಪುರದಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್)ದ ಸುಮಾರು 1,512 ಕುಟುಂಬಗಳಿಗೆ ನ್ಯಾಯಾಲಯದ ನಿರ್ದೇಶನದ ಮೇಲೆಯೂ ಫ್ಲಾಟ್‌ಗಳ ನಿರ್ಮಾಣಕ್ಕೆ ಮುಂದಾಗದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಖ್ಯಸ್ಥರು ಜನವರಿ 5ರಂದು ಖುದ್ದು ಹಾಜರಿರುವಂತೆ ಸೂಚನೆ ನೀಡಿದೆ.
ಕರ್ನಾಟಕ ಆರ್ಥಿಕ ಹಿಂದುಳಿದ ವರ್ಗಗಳ 1,521 ರೆಸಿಡೆನ್ಷಿಯಲ್ಸ್ ಸೋಷಿಯಲ್ ವೆಲ್ಪೇರ್ ಸೋಸೈಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಪ್ರಕರಣ ಸಂಬಂಧ ಪ್ರಗತಿಯನ್ನು ಕಾಣಬಹುದು ಎಂಬ ನಿರೀಕ್ಷೆಯಿತ್ತು. ಈ ಹಿಂದೆ ಸಲ್ಲಿಕೆ ಮಾಡಿದ್ದ ಜಂಟಿ ಮೆಮೋಗಳನ್ನು ಸಲ್ಲಿಸಿ ಫ್ಲಾಟ್ ನಿರ್ಮಾಣಕ್ಕೆ ಬರವಸೆ ನೀಡಲಾಗಿತ್ತು. ಆದರೆ, ಈವರೆಗೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಪ್ರತಿವಾದಿಗಳಾಗಿರುವ ಸರ್ಕಾರದ ಅಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು, ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಈವರೆಗೂ ಅರ್ಜಿದಾರರು ದುರಾದೃಷ್ಟುವಶಾತ್ ಸಂತ್ರಸ್ಥರಾಗಿಯೇ ಮುಂದುವರೆಯಲಾಗುತ್ತಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
ಜೊತೆಗೆ ಈ ಸಂದರ್ಭದಲಿ ಬಿಡಿಎ ಆಯುಕ್ತರು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರನ್ನು ನ್ಯಾಯಾಲಯದಲ್ಲಿ ಹಾಜರಿರುವಂತೆ ನಿರ್ದೇಶನ ನೀಡುವುದು ಬಿಟ್ಟು ಯಾವುದೇ ಮಾರ್ಗ ತಮ್ಮ ಮುಂದೆ ಇಲ್ಲ ಎಂದು ನ್ಯಾಯಪೀಠ ತಿಳಿಸಿ, ಖುದ್ದು ಹಾಜರಿಗೆ ಸೂಚನೆ ನೀಡಿತು.
ಇದನ್ನೂ ಓದಿ: ಈಜಿಪುರ ಮೇಲ್ಸೇತುವೆ ನಿರ್ಮಾಣ ವಿಳಂಬ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ತರಾಟೆ