ಬೆಂಗಳೂರು : ನವೆಂಬರ್ 17 ರಿಂದ ಈ ಶೈಕ್ಷಣಿಕ ವರ್ಷ ಮುಗಿಯುವ ತನಕ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಯಾವುದೇ ರಜೆ ಇರುವುದಿಲ್ಲ ಎಂದು ರಾಜ್ಯ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಶುಕ್ರವಾರದವರೆಗೆ ಕಾಲೇಜುಗಳಲ್ಲಿ ತರಗತಿ ನಡೆಯುತ್ತದೆ. ಶನಿವಾರ ಮತ್ತು ಭಾನುವಾರ ಆನ್‌ಲೈನ್ ಮೂಲಕ ತರಗತಿ ಮುಂದುವರಿಯುತ್ತದೆ. ಈ ಶೈಕ್ಷಣಿಕ ವರ್ಷ ಮುಗಿಯುವ ತನಕ ಯಾವುದೇ ರಜೆಗಳು ಇರುವುದಿಲ್ಲ. ಶನಿವಾರ ಮತ್ತು ಭಾನುವಾರ ಉಪನ್ಯಾಸಕರು ಆನ್‌ಲೈನ್ ಮೂಲಕ ತರಗತಿ ನಡೆಸಬೇಕು. ಈಗಾಗಲೇ ಶೈಕ್ಷಣಿಕ ವರ್ಷ ಬಹುತೇಕ ತರಗತಿಗಳಿಲ್ಲದೇ ಮುಗಿಯುತ್ತಾ ಬಂದಿದೆ. ಹೀಗಾಗಿ, ಉಳಿದಿರುವ ಶೈಕ್ಷಣಿಕ ಅವಧಿಯಲ್ಲಿ ಯಾವುದೇ ರಜೆಗಳನ್ನು ಕೊಡದಿರಲು ನಿರ್ಧರಿಸಲಾಗಿದೆ ಎಂದರು.
ನ.17 ರಿಂದ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು ತೆರೆಯಲು ಸಭೆಯಲ್ಲಿ ತೀರ್ಮಾನ ಆಗಿದೆ. ನಾನು ಮತ್ತು ಡಿಸಿಎಂ ಅಶ್ವತ್ಥ ನಾರಾಯಣ ಭಾಗವಹಿಸಿದ್ದ ಸಿಎಂ ನೇತೃತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಶಿಕ್ಷಣ ಸುಧಾರಣೆ ಸಲಹೆಗಾರನಾಗಿ ನಾನು ನೀಡಿದ ವರದಿ ಪ್ರಕಾರ, ಪದವಿ ಕಾಲೇಜುಗಳನ್ನು ನ. 17 ರಿಂದ ತೆರೆಯಲು ತೀರ್ಮಾನಿಸಲಾಗಿದೆ. ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜಿನ ಸಿಲೆಬಸ್ ಕಡಿತ ಮಾಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದರು.
ಶಿಫ್ಟ್ ಪ್ರಕಾರ ತರಗತಿ : ಶಿಫ್ಟ್ ಪ್ರಕಾರ ತರಗತಿ ನಡೆಸಲು ನಿರ್ಧರಿಸಲಾಗಿದೆ. ಒಂದು ತರಗತಿಯಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಮಾಡಲು ಅವಕಾಶ ಇರಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ತರಗತಿಯ ಒಳಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪ್ರತೀ ಕಾಲೇಜಿನ ಪ್ರಾಂಶುಪಾಲರ ನೇತೃತ್ವದಲ್ಲಿ ಸಮಿತಿ ರಚನೆಗೆ ನಿರ್ಧರಿಸಲಾಗಿದೆ. ಮೆಂಟರ್ ಸಿಸ್ಟಮ್ ಜಾರಿಗೆ ತರಲು ನಿರ್ಧಾರ ಮಾಡಾಗಿದೆ. ಕಾಲೇಜಿಗೆ ಬಾರದ ವಿದ್ಯಾರ್ಥಿಗಳನ್ನು ತರಗತಿಗೆ ಕರೆತರಲು ಮೆಂಟರ್ ಸಿಸ್ಟಮ್ ಅಳವಡಿಸಲಾಗುವುದು. ಈ ವ್ಯವಸ್ಥೆಯಡಿ ಪ್ರತೀ ಉಪನ್ಯಾಸಕರಿಗೆ 30 ವಿದ್ಯಾರ್ಥಿಗಳ ಜವಾಬ್ದಾರಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಡಿಗ್ರಿ ಮತ್ತು ಇಂಜಿನಿಯರಿಂಗ್ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಡಿಗ್ರಿ ಕಾಲೇಜಿನ ಸಾಧಕಬಾಧಕ ಗಮನಿಸಿ, ಪಿಯು ಕಾಲೇಜು ಮತ್ತು ಶಾಲೆಗಳನ್ನು ತೆರೆಯುವ ಚಿಂತನೆ ಇದೆ. ಸದ್ಯಕ್ಕೆ ಪಿಯು ಕಾಲೇಜು ಮತ್ತು ಶಾಲೆಗಳ ಆರಂಭಕ್ಕೆ ಯಾವುದೇ ನಿರ್ದಿಷ್ಟ ದಿನಾಂಕ ನಿಗದಿ ಮಾಡಿಲ್ಲ ಎಂದರು.