ಬೆಂಗಳೂರು: ಇಸ್ಕಾನ್ ದೇಗುಲದಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಮಾಸದ ಶುದ್ಧ ಪ್ರತಿಪದೆ ದಿನವಾದ ಇಂದು ಹರೇಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದ ಶ್ರೀಕೃಷ್ಣ ಹಾಗೂ ಬಲರಾಮ ಉತ್ಸವ ಮೂರ್ತಿಗಳಿಗೆ ಗಿರಿಧಾರಿ ಅಲಂಕಾರ ಮಾಡಲಾಗಿತ್ತು. ಇದರ ಜೊತೆಗೆ ರಾಧಾಕೃಷ್ಣ ಉತ್ಸವ ಮೂರ್ತಿಗಳಿಗೆ ಶೃಂಗರಿಸಲಾಗಿತ್ತು. ದೇವಸ್ಥಾನವು ತಳಿರು-ತೋರಣ, ಹೂ ಮಾಲೆ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.
ಈ ವೇಳೆ ಗೋವರ್ಧನ ಗಿರಿ ಪೂಜೆ ಜೊತೆಗೆ ಅಲಂಕೃತವಾದ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಯಿತು. ಇತ್ತ ಭಕ್ತರು ಶ್ರೀಕೃಷ್ಣನ ಲೀಲೆಗಳ ಸಂಗೀತೋತ್ಸವ ನಡೆಸಿಕೊಟ್ಟರು.
ಗೋವರ್ಧನಗಿರಿ ಮಾದರಿ ಕೇಕ್:
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗೋವರ್ಧನ ಬೆಟ್ಟದ ಆಕೃತಿಯನ್ನು ಹೋಲುವ ಒಂದು ಸಾವಿರ ಕೆಜಿ ತೂಕದ ಕೇಕಿನಿಂಸ ಗಿರಿಯನ್ನು ತಯಾರಿಸಲಾಗಿತ್ತು. ಜಾಮೂನು, ರಸಗುಲ್ಲ, ಬರ್ಫಿ, ಲಡ್ಡು, ಪೇಡಾ, ಚಕ್ಕುಲಿ, ನಿಪ್ಪಟ್ಟು ಸೇರಿ ವಿವಿಧ ಬಗೆಯ 56 (ಚಪ್ಪನ್ ಭೋಗ) ತಿಂಡಿಗಳನ್ನು ಕೃಷ್ಣನಿಗೆ ಸಮರ್ಪಿಸಲಾಯಿತು. ಭಕ್ತಾಧಿಗಳು ಮನೆಯಿಂದ ತಯಾರಿಸಿದ ಬಗೆ ಬಗೆಯ ಖಾದ್ಯಗಳನ್ನು ತಂದು ದೇವರಿಗೆ ಸಮರ್ಪಿಸಿದರು. ಬಳಿಕ ನೈವೇದ್ಯವನ್ನು ಭಕ್ತಾಧಿಗಳಿಗೆ ಹಂಚಲಾಯಿತು.
ಇದನ್ನೂ ಓದಿ: ರಾಮನಗರ: ಪರಿಸರಪ್ರೇಮಿಯ ಪಕ್ಷಿಪ್ರೇಮಕ್ಕೆ ಮನಸೋಲದವರಿಲ್ಲ!