ದೇವನಹಳ್ಳಿ: ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಮೇಲೆ ಕೊರೊನಾ ವೈರಸ್ ಪರಿಣಾಮ ಬೀರಿದ್ದು, ಶೇ.50ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.ಇದರಿಂದ ಕ್ಯಾಬ್ಗಳ ಸಂಚಾರ ಇಳಿಮುಖವಾಗಿದೆ.
ದೇಶದ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ 3ನೇ ಅತಿ ದೊಡ್ಡ ವಿಮಾನ ನಿಲ್ದಾಣ ಇದಾಗಿದ್ದು, ಇಲ್ಲಿನ ಪ್ರಯಾಣಿಕರ ಮೇಲೆಯೆ ಅವಲಂಬಿತರಾದ ಕ್ಯಾಬ್ ಚಾಲಕರ ಆದಯವು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಅಂತಾರಾಷ್ಟ್ರೀಯ ವಿಮಾನಗಳ ಏರ್ ಟ್ರಾಫಿಕ್ ಪ್ರಮಾಣದಲ್ಲಿಯೂ ಶೇ.20ರಷ್ಟು ಕಡಿತವಾಗಿದೆ. ನಿತ್ಯ 14 ರಿಂದ 15 ಸಾವಿರ ಪ್ರಯಾಣಿಕರು ಕೆಐಎಎಲ್ನಲ್ಲಿ ಪ್ರಯಾಣಿಸುತ್ತಿದ್ದರು. ಒಮ್ಮೆಲೆ 6 ರಿಂದ 7 ಸಾವಿರಕ್ಕೆ ಕುಸಿದಿದೆ ಎಂದು ಕೆಐಎಎಲ್ ವಿಮಾನ ನಿಲ್ದಾಣದ ನಿರ್ವಹಣಾ ವಿಭಾಗದ ವಕ್ತಾರರು ಮಾಹಿತಿ ನೀಡಿದ್ದಾರೆ.
ಕ್ಯಾಬ್ ಚಾಲಕರ ಜೊತೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಮೇಲು ಕರಿನೆರಳು ಆವರಿಸಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಘಟಕವಿಲ್ಲ: ಎಲ್ಲ ಜನನಿಬಿಡ ಪ್ರದೇಶಗಳಲ್ಲಿ ಕೊರೊನಾ ತಪಾಸಣೆ ಹಾಗೂ ಜಾಗೃತಿ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ ಯಾವುದೇ ತಪಾಸಣಾ ಘಟಕಗಳನ್ನು ತೆರೆದಿಲ್ಲ. ವಾಣಿಜ್ಯನಗರಿ ಅಂತಾರಾಷ್ಟ್ರೀಯ ದರ್ಜೆಗೆ ಏರಿದ್ದರು ಯಾವುದೇ ತಪಾಸಣೆಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಕೊರೊನಾ ವೈರಸ್ ಭಯದಿಂದಾಗಿ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿಕೊಂಡು ಜನರು ಪ್ರಯಾಣಿಸುತ್ತಿದ್ದಾರೆ. ಜಿಲ್ಲಾಡಳಿತವು ಕಿಮ್ಸ್, ರೈಲ್ವೆ ನಿಲ್ದಾಣದಲ್ಲಿ ತಪಾಸಣಾ ಹಾಗೂ ಜಾಗೃತಿ ಘಟಕಗಳನ್ನು ಸ್ಥಾಪಿಸಿದೆ.