ಬೆಂಗಳೂರು: ನಾಳೆ 74ನೇ ಸ್ವಾತಂತ್ರ್ಯೋತ್ಸವದ ದಿನ. ಮಹಾಮಾರಿ ಕೊರೊನಾ ಇಲ್ಲದಿದ್ದರೆ ಪ್ರತಿ ವರ್ಷದಂತೆ ದೇಶದಾದ್ಯಂತ ಮೈನವಿರೇಳಿಸುವ ತ್ರಿವರ್ಣ ಧ್ವಜದ ಹಾರಾಟ, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ, ದೇಶಭಕ್ತಿಯಿಂದ ಮಿಂದೇಳುವ ಹೆಮ್ಮೆಯ ದಿನವಾಗುತ್ತಿತ್ತು. ಆದರೆ..!
ಆದರೆ, ಕೊರೊನಾದಿಂದ ಈ ಸಂಭ್ರಮಕ್ಕೆ ಚ್ಯುತಿಯುಂಟಾಗಿದೆ. ಶಾಲೆಗಳು ಮುಚ್ಚಿವೆ, ಜನ ಸೇರುವಂತಿಲ್ಲ, ಈ ಸಂದರ್ಭದಲ್ಲಿ ರಾಷ್ಟ್ರ ಧ್ವಜವನ್ನು ಕೊಂಡುಕೊಳ್ಳುವವರು ಇಲ್ಲವಾಗಿದೆ. ಹಾಗಾಗಿ, ಈ ವ್ಯಾಪಾರ ಸಹ ಕುಸಿದಿದೆ.
ರಾಷ್ಟ್ರಧ್ವಜ ತಯಾರಿಕಾ ಘಟಕದಲ್ಲಿ ಕುಸಿದ ಬೇಡಿಕೆ:
ಗರಗ ಹಾಗೂ ಹುಬ್ಬಳ್ಳಿ ತಾಲೂಕಿನ ಬೆಂಗೇರಿಯಲ್ಲಿ ಮಾತ್ರ ಖಾದಿ ಬಟ್ಟೆಯ ರಾಷ್ಟ್ರಧ್ವಜ ತಯಾರಿಕೆ ಮಾಡಲಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಧ್ವಜಕ್ಕೆ ಬೇಕಾದ ಖಾದಿ ಬಟ್ಟೆಯನ್ನು ಮಾತ್ರ ರಾಜ್ಯದ ಎಲ್ಲ ಖಾದಿ ಉತ್ಪಾದನಾ ಘಟಕಗಳು ಕಳುಹಿಸಿಕೊಡುತ್ತವೆ. ಆದರೆ, ಕೊರೊನಾ ಸಂಕಷ್ಟದಿಂದ ಈ ಬಾರಿ ರಾಷ್ಟ್ರಧ್ವಜದ ಬೇಡಿಕೆ ಕಡಿಮೆಯಾಗಿದೆ. ಧ್ವಜ ತಯಾರಿಕೆಯನ್ನೇ ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. '16 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿತ್ತು. ಸುಮಾರು ಎರಡೂವರೆ ಕೋಟಿ ರಾಷ್ಟ್ರಧ್ವಜದ ಬೇಡಿಕೆ ಕೇಳಿಬರುತ್ತಿತ್ತು. ಆದರೆ, ಈಗ ಕೊರೊನಾದಿಂದ ಸೇಲ್ ಕೂಡ ಕಡಿಮೆಯಾಗಿದೆ. ತಯಾರಾದ ಧ್ವಜಗಳ ಬೇಡಿಕೆಯೇ ಇಲ್ಲದಂತಾಗಿದೆ' ಎನ್ನುತ್ತಾರೆ ಬೆಂಗೇರಿ ಗ್ರಾಮದ ಅನ್ನಪೂರ್ಣ ರೂಟಿ.
ರಾಜ್ಯಮಟ್ಟದ ಆಚರಣೆಗೂ ಅಡಚಣೆ:
ಈ ವೇಳೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಮಟ್ಟದ ಸ್ವಾತಂತ್ರ್ಯೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ರಾಜ್ಯದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಪಥ ಸಂಚಲನದಲ್ಲಿ ಭಾಗವಹಿಸುತ್ತಿದ್ದರು. ಆದರೆ, ಈ ಬಾರಿ ಹೆಚ್ಚು ಜನರಿಲ್ಲದೆ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿದೆ. ಕೋವಿಡ್-19 ಹಿನ್ನೆಲೆ ಸಮಾರಂಭದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಸಹ ನೀಡಿಲ್ಲ.
ನಾಳೆ ಬೆಳಗ್ಗೆ 8.58ಕ್ಕೆ ಮೈದಾನಕ್ಕೆ ಆಗಮಿಸಲಿರುವ ಸಿಎಂ 9.00 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣದ ಬಳಿಕ ತುಕಡಿಗಳ ತಪಾಸಣೆ ಇರುವುದಿಲ್ಲ. ಅವರ ಭಾಷಣ ಮುಗಿದ ಬಳಿಕ ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆ ಮಾತ್ರ ಇರಲಿವೆ. ಈ ಬಾರಿಯ ಸಮಾರಂಭಕ್ಕೆ 75 ಮಂದಿ ಕೊರೊನಾ ವಾರಿಯರ್ಸ್ ಹಾಗೂ 25 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾದವರನ್ನು ಕರೆಸಲಾಗಿದೆ. ಜೊತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಡಿಫೆನ್ಸ್ ಅಧಿಕಾರಿಗಳು ಸೇರಿ ಕೇವಲ 500 ಆಸನಗಳ ವ್ಯವಸ್ಥೆ ಮಾತ್ರ ಕಲ್ಪಿಸಲಾಗಿದೆ.
ಶಾಲೆಗಳಲ್ಲೂ ಮಕ್ಕಳ ಕಲರವ ಇಲ್ಲ:
ಸ್ವಾತಂತ್ರ್ಯ ದಿನಾಚರಣೆ ವಿದ್ಯಾರ್ಥಿಗಳ ಪಾಲಿಕೆ ರಾಷ್ಟ್ರೀಯ ಹಬ್ಬದ ದಿನ. ಆದರೆ, ಕೊರೊನಾದಿಂದ ಈ ಬಾರಿ ಶಾಲೆ-ಕಾಲೇಜುಗಳು ಮುಚ್ಚಿವೆ. ಹೀಗಾಗಿ ಸ್ವಾತಂತ್ರ್ಯ ದಿನವನ್ನು ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಸಾಮಾಜಿಕ ಅಂತರದ ಜೊತೆಗೆ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಭಾಗಿಯಾಗಬಹುದು ಎಂದಿದೆ. ಇನ್ನು ನಗರದ ಸಪ್ತಗಿರಿ ಕಾಲೇಜು ಸೇರಿದಂತೆ ಕೆಲಕಡೆ ಮಾತ್ರ ನಾಳೆಯ ಸ್ವಾತಂತ್ರ್ಯ ದಿನಕ್ಕೆ ಸರಳ ಸಿದ್ಧತೆ ನಡೆದಿದೆ. ಬೆಂಗಳೂರಿನ ಪ್ರತಿ ರಸ್ತೆಗಳಲ್ಲಿ ಬಾವುಟ ಹಾಗೂ ದೇಶಭಕ್ತಿ ಬಿಂಬಿಸುವ ಐಕಾನ್, ಬಟ್ಟೆ, ಪಿನ್, ಬ್ಯಾಂಡ್ಗಳ ಮಾರಾಟ ನಡೆಯುತ್ತಿದೆ. ಆದರೆ, ಹೆಚ್ಚಿನ ವ್ಯಾಪಾರಿಗಳೂ ಕಾಣಿಸುತ್ತಿಲ್ಲ, ವ್ಯಾಪಾರಿಗಳಿದ್ದರೂ ಗ್ರಾಹಕರಿಲ್ಲ.
ಒಟ್ಟಾರೆ ಈ ಭಾರಿಯ ಪರಿಸ್ಥಿತಿ ಬಗ್ಗೆ ಮಾತನಾಡಿದ ಮಾಜಿ ಮೇಯರ್ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್, ಇಲಾಖೆಗಳು, ಶಾಲೆಗಳಲ್ಲಿ ಪ್ರೊಟೋಕಾಲ್ ಪ್ರಕಾರ ಸರಳವಾಗಿ ಆಚರಿಸಲು ತಿಳಿಸಲಾಗಿದೆ. ಆದರೆ, ಕಳೆದ 73 ವರ್ಷಗಳಲ್ಲಿ, 50 ವರ್ಷದಿಂದ ಹತ್ತಿರದಿಂದ ಸ್ವಾತಂತ್ರ್ಯ ದಿನದಲ್ಲಿ ಭಾಗಿಯಾಗಿದ್ದೆ. ಇದೇ ಮೊದಲ ಬಾರಿಗೆ ಅದ್ಧೂರಿಯಾದ ಸಂಭ್ರಮಕ್ಕೆ ಅಡಚಣೆಯಾಗಿದ್ದಕ್ಕೆ ಬೇಸರವಾಗುತ್ತದೆ ಎಂದರು.