ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇಂದು ಚರ್ಚೆ ಮಾಡಿ ಅಂತಿಮಗೊಳಿಸಲಾಗುವುದು. ಸಂಭವನೀಯ ಅಭ್ಯರ್ಥಿಗಳಿಗೆ ಈಗಾಗಲೇ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿದೆ. ಆದರೆ, ನಾವು ಹೇಳಿದವರೇ ಅಂತಿಮವಲ್ಲ.
ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾಗಬಹುದು ಎಂಬುದನ್ನು ಈಗಾಗಲೇ ನಮ್ಮ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು. ಮಾಗಡಿಯಿಂದ ಪಂಚರತ್ನ ರಥಯಾತ್ರೆ ಮತ್ತೆ ಆರಂಭ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಸಿಎಂ ಇಬ್ರಾಹಿಂ ತಿಳಿಸಿದರು.
ಮಹಾಜನ್ ವರದಿಯೇ ಅಂತಿಮ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರ ಸಂಬಂಧ ಸಚಿವ ಸಮಿತಿ ರಚನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಗಡಿ ಸಮಸ್ಯೆ ಈಗಾಗಲೇ ಮುಗಿದು ಹೋಗಿರುವ ವಿಚಾರ. ಸಭೆ ಅವಶ್ಯಕತೆ ಇರಲಿಲ್ಲ. ಸಮಿತಿ ಸಹ ಬೇಕಿರಲಿಲ್ಲ. ಮಹಾಜನ್ ವರದಿಯೇ ಅಂತಿಮ. ಕನ್ನಡಿಗರು ಮರಾಠಿಗರು ಸಹೋದರರಂತೆ ಬಾಳುತ್ತಿದ್ದಾರೆ. ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸುತ್ತಿದ್ದು, ಚುನಾವಣೆಗಾಗಿ ಸಮಿತಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳು ಈ ವಿಚಾರದಲ್ಲಿ ಹೇಳಿಕೆ ಕೊಡಬಾರದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿ ಹೇರಿಕೆ ಮಾಡಿದ್ದು ಯಾರು? ಆಂಧ್ರ ಪ್ರದೇಶದಲ್ಲಿ ತೆಲುಗು, ತಮಿಳುನಾಡಿನಲ್ಲಿ ತಮಿಳು ಭಾಷೆ ಇದೆ. ಕರ್ನಾಟಕದಲ್ಲಿ ಕನ್ನಡ ಇರಲಿ ಬಿಡಿ. ಮನೆ ಮನೆಗೂ ಕನ್ನಡ ಧ್ವಜ ಕೊಡುತ್ತಿದ್ದೇವೆ. ಅಪ್ಪ ಅಮ್ಮ ಅಂತ ನಾವು ಇಟ್ಟುಕೊಳ್ಳುತ್ತೇವೆ. ಮಾತಾಜಿ, ಪಿತಾಜಿ ಎಂಬುದನ್ನು ಅವರೇ ಇಟ್ಟುಕೊಳ್ಳಲಿ ಎಂದರು.
ನಾವು ಭಾವನಾತ್ಮಕ ವಿಚಾರ ಮೇಲೇ ರಾಜಕೀಯ ಮಾಡಲ್ಲ: ನಾವು ಯಾರ ಶಕ್ತಿಯ ಮೇಲೂ ಅವಲಂಭಿತವಾಗಿಲ್ಲ. ರಾಜ್ಯದಲ್ಲಿ ಜನತಾದಳಕ್ಕೆ ತನ್ನದೇ ಆದ ಶಕ್ತಿ ಇದೆ. ಅದರ ಆಧಾರದ ಮೇಲೆ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ತಿರುಗೇಟು ನೀಡಿದರು.
ಜೆಡಿಎಸ್ ಮುಖಂಡ, ಮಾಜಿ ಶಾಸಕ ವೈ.ಎಸ್.ವಿ. ದತ್ತ ಪಕ್ಷ ಬಿಡುವುದಿಲ್ಲ ಎಂದಿದ್ದರು. ಈಗ ಪಕ್ಷ ಬಿಡುವ ವಿಚಾರ ಪ್ರಸ್ತಾಪವಾಗುತ್ತಿದೆ. ಚುನಾವಣೆ ಸಮಯದಲ್ಲಿ ಪಕ್ಷ ಬಿಡುವುದು, ಸೇರುವುದು ಸಾಮಾನ್ಯ. ಜೆಡಿಎಸ್ ಬಾಗಿಲು ಸದಾ ತೆರೆದಿರುತ್ತದೆ. ಬರುವವರು ಬರುತ್ತಾರೆ. ಹೋಗುವವರು ಹೋಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ: 'ಕಾಟಾಚಾರಕ್ಕೆ ಅಭ್ಯರ್ಥಿ ಆಗುವುದು ಬೇಡ..': ಹೆಚ್ಡಿಕೆ ಖಡಕ್ ಕ್ಲಾಸ್