ಬೆಂಗಳೂರು: ಬಿಬಿಎಂಪಿಯ 198 ವಾರ್ಡ್ಗಳ ಸದಸ್ಯರು, ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಹೊರಡಿಸಿದ್ದಾರೆ. ಆಸ್ತಿ ವಿವರ ಸಲ್ಲಿಸುವಂತೆ ಸೂಚಿಸಿದ್ದರೂ ಕಳೆದ 9 ವರ್ಷಗಳಿಂದ ಯಾರೂ ಆಸ್ತಿ ವಿವರ ಸಲ್ಲಿಸಿಲ್ಲ. ಇದೀಗ ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸುವಂತೆ ಆದೇಶ ಹೊರಡಿಸಿದ್ದು, ಲೋಕಾಯುಕ್ತ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಸದಸ್ಯರು ತೀರ್ಮಾನಿಸಿದ್ದಾರೆ.
ರಾಜ್ಯದ 224 ಶಾಸಕರ ರೀತಿಯಲ್ಲೇ, ಬಿಬಿಎಂಪಿಯ 198 ಸದಸ್ಯರೂ ಕೂಡ ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. 2010ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದ್ದರೂ ಕೂಡ, ಈವರೆಗೂ ಯಾವುದೇ ಒಬ್ಬ ಸದಸ್ಯರೂ ಕೂಡ ಆಸ್ತಿ ವಿವರ ಸಲ್ಲಿಸಿಲ್ಲ.
ಬಿಬಿಎಂಪಿಯಲ್ಲಿ ಈ ಹಿಂದಿನಿಂದಲೂ, ಕೆಎಂಸಿ ಆಕ್ಟ್ ಪ್ರಕಾರ ಪ್ರತಿಯೊಬ್ಬ ಸದಸ್ಯರೂ ಪ್ರತೀ ವರ್ಷ ತಮ್ಮ ಆಸ್ತಿ ವಿವರವನ್ನು ಮೇಯರ್ ಅವರಿಗೆ ಸಲ್ಲಿಸುತ್ತಿದ್ದರು. ಒಂದು ವೇಳೆ ಸಲ್ಲಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, 2010ರಲ್ಲಿ ಬಂದ ಲೋಕಾಯುಕ್ತ ಕಾಯ್ದೆಯ ಪ್ರಕಾರ, ಲೋಕಾಯುಕ್ತ ಸಂಸ್ಥೆಗೂ ಆಸ್ತಿ ವಿವರ ಸಲ್ಲಿಸುವಂತೆ ಸ್ಪಷ್ಟಪಡಿಸಿತ್ತು. ಆದ್ರೆ, ಯಾವೊಬ್ಬ ಸದಸ್ಯರೂ ಆಸ್ತಿ ವಿವರ ಸಲ್ಲಿಸದ ಹಿನ್ನೆಲೆ, ಸಾಮಾಜಿಕ ಹೋರಾಟಗಾರ ವೆಂಕಟೇಶ್ ಎನ್ನುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದೀಗ ಆಸ್ತಿ ವಿವರ ಸಲ್ಲಿಸೋದು ಕಡ್ಡಾಯ ಅಂತ, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ..
ಲೋಕಾಯುಕ್ತ ಆದೇಶದನ್ವಯ, ಬಿಬಿಎಂಪಿ ಸದಸ್ಯರಿಗೆ ಆಸ್ತಿವಿವರ ಸಲ್ಲಿಸಲು ಸೂಚಿಸುವುದಾಗಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ. ಆದ್ರೆ , ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಸಲು ಒಪ್ಪದ ಸದಸ್ಯರು, ಲೋಕಾಯುಕ್ತ ಕಾಯ್ದೆಗಿಂತ, ಕೆಎಂಸಿ ಕಾಯ್ದೆಯೇ ಸ್ಟ್ರಾಂಗ್ ಆಗಿದ್ದು, ಲೋಕಾ ತೀರ್ಪಿನ ವಿರುದ್ಧ, ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಕೆಎಂಸಿ ನಿಯಮದ ಪ್ರಕಾರ ಬಿಬಿಎಂಪಿ ಮೇಯರ್ಗೆ ಆಸ್ತಿ ವಿವರ ಸಲ್ಲಿಸದಿದ್ರೆ, ಬಿಬಿಎಂಪಿಯ ಸದಸ್ಯರು ತಮ್ಮ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.