ಬೆಂಗಳೂರು: ಮೊಬೈಲ್ ಆಧಾರಿತ ಆಪ್ ಮೂಲಕ ಎರಡೂ ಹಂಗಾಮಿನ ನಿಖರ ಬೆಳೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು ಪಹಣಿಗಳಲ್ಲಿ ಬೆಳೆ ಮಾಹಿತಿ ನಮೂದಿಸಲಾಗುತ್ತಿದೆ. ಆದರೆ, ಕಾಲ ಕ್ರಮೇಣ ಆ ವ್ಯವಸ್ಥೆ ಸಡಿಲಗೊಂಡು, ನಿಖರ ಮಾಹಿತಿ ನಮೂದು ಆಗಿತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಬೆಳೆಯ ನಿಖರ ಮಾಹಿತಿ ಸಿಗುತ್ತಿರಲಿಲ್ಲ. ಅಂದಾಜಿನ ಮೇಲೆ ನಾವು ಬೆಳೆಯ ಮಾಹಿತಿ ಪಡೆಯುತ್ತಿದ್ದೆವು. ಎರಡನ್ನೂ ತುಲನೆ ಮಾಡಿದಾಗ ಅಜಗಜಾಂತರ ಆಗುತ್ತಿತ್ತು. ಹೀಗಾಗಿ ಆಧುನಿಕತೆಯೊಂದಿಗೆ ಎರಡು ಹಂಗಾಮಿನ ಬೆಳೆ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಸುಮಾರು 2.20 ಕೋಟಿ ರೈತರ ಪ್ಲಾಟ್ಗಳಲ್ಲಿ ಯಾವ ರೈತರು ಯಾವ ಬೆಳೆ ಇಟ್ಟಿದ್ದಾರೆ ಅನ್ನೋದನ್ನ ಗುರ್ತಿಸಲಾಗುತ್ತದೆ. ಜಿಪಿಎಸ್ ಆಧಾರಿತವಾಗಿರುವ ಆಪ್ ಮೂಲಕ ಸರ್ವೆ ನಂಬರಿನ ಜಮೀನಿಗೆ ಖುದ್ದು ಹೋಗಿ ನಿಖರ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ಇದಕ್ಕಾಗಿ ಸುಮಾರು 90 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದರು.
ವೈದ್ಯಕೀಯ ಇಎಂಬಿ ಕೋರ್ಸ್ ವಿಸ್ತರಣೆ:
ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಗಳಿಗೆ ಎರಡು ವರ್ಷದಿಂದ ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಸರ್ಕಾರಿ ಆಸ್ಪತ್ರೆಯಲ್ಲೇ ಪಿಜಿ ಕೋರ್ಸ್ಗಳಿಗೆ ಅಡ್ಮಿಷನ್ ಮಾಡಿಸಿಕೊಂಡು ಅವರಿಗೆ ಎಂಎಸ್ ಪದವಿ ಕೊಡಲು ಈಗಾಗಲೇ ಆರಂಭ ಮಾಡಿದ್ದೇವೆ. ಈಗಾಗಲೇ ಆರೇಳು ಆಸ್ಪತ್ರೆಗಳಲ್ಲಿ 50 ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು 10 ಆಸ್ಪತ್ರೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇನ್ನು, ಇದಕ್ಕೆ ನೀಟ್ ಮೂಲಕ ಇದಕ್ಕೆ ಅಡ್ಮಿಷನ್ ನಡೆಯಲಿದೆ. ಇದರಿಂದ ನಮ್ಮ ಸರ್ಕಾರಿ ಆಸ್ಪತ್ರೆಗಳಿಗೆ ತಜ್ಞ ವೈದ್ಯರ ಲಭ್ಯತೆ ಹೆಚ್ಚಾಗುತ್ತದೆ. ಅವರು ಪಿಜಿ ಕೋರ್ಸ್ ಆದ ಬಳಿಕ ಮೂರು ವರ್ಷ ನಮ್ಮಲ್ಲೇ ಕರ್ತವ್ಯ ನಿಭಾಯಿಸಬೇಕು. ಈ ಇಎಂಬಿ ಕೋರ್ಸ್ ಆರಂಭಿಸುವುದರಿಂದ 72 ಪಿಜಿ ಸೀಟುಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳುತ್ತದೆ. ಇದಕ್ಕಾಗಿ 16.70 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಗಂಭೀರ ಚರ್ಚೆ
ಎಸ್ಟಿ ಮೀಸಲಾತಿ ಬಗ್ಗೆ ಸಂಪುಟದಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ಮೀಸಲಾತಿ ಸಾಧಕ - ಬಾಧಕ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸುವುದೋ ಅಥವಾ ಆಯೋಗ ರಚಿಸಿ ಮಾಡುವ ಬಗ್ಗೆ ಮಾರ್ಗೋಪಾಯಗಳನ್ನು ತಿಳಿಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶೇ.50 ಮಿತಿಯೊಳಗೆ ಮಾಡುವುದೋ ಅಥವಾ ಅದನ್ನು ಮೀರಿ ಮೀಸಲಾತಿ ನೀಡಬೇಕೋ? ಈ ಎಲ್ಲ ವಿಚಾರಗಳ ಬಗ್ಗೆ ಮಾರ್ಗೋಪಾಯಗಳನ್ನು ಪರಿಶೀಲಿಸಿ ಸಂಪುಟಕ್ಕೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ಫಸಲ್ ಭೀಮಾ ಯೋಜನೆಯಡಿ ರೈತರ ವಿಮಾ ಕಂತು ಪಾವತಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಕೆಲವು ಬೆಳೆಗಳಿಗೆ ಶೇಕಡಾ 2 ಮತ್ತು ಕೆಲವು ಬೆಳೆಗಳಿಗೆ ಶೇಕಡಾ 1.5 ರಷ್ಟು ತಮ್ಮ ಪಾಲಿನ ಕಂತನ್ನು ಪಾವತಿಸಬೇಕು. ಉಳಿದ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ 50:50 ರಷ್ಟು ಪಾವತಿಸುತ್ತದೆ. ಅದರಂತೆ 2019-20ನೇ ಸಾಲಿನ ಪ್ರೀಮಿಯಂ ಪಾವತಿಗಾಗಿ 546.21 ಕೋಟಿ ರೂ. ಪಾವತಿಸಲು ಸಚಿವ ಸಂಪಟ ಸಭೆ ಒಪ್ಪಿಗೆ ನೀಡಿದೆ.
ಮೈಸೂರಿನಲ್ಲಿ ಜೆ ನರ್ಮ್ ಯೋಜನೆಯಡಿ 24x7 ಕುಡಿವ ನೀರು ಪೂರೈಸಲು ಯೋಜನೆ ರೂಪಿಸಲಾಗಿತ್ತು. ಮೊದಲು 194 ಕೋಟಿ ರೂ.ಗಳಿಗೆ ಅಂದಾಜು ಮಾಡಲಾಗಿತ್ತು. ಅದು ಈಗ ಪರಿಷ್ಕೃತಗೊಂಡು 229.93 ಕೋಟಿ ರೂಗಳಿಗೆ ಹೆಚ್ಚಳವಾಗಿದೆ. ಈ ಹೆಚ್ಚುವರಿ 50.76 ಕೋಟಿ ರೂಗಳನ್ನು ಒದಗಿಸಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಪಾಲನ್ನು ಸಹ ರಾಜ್ಯ ಸರ್ಕಾರವೇ ಭರಿಸಲಿದ್ದು, ಒಟ್ಟಾರೆ 90 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿದೆ ಎಂದರು.
ಇನ್ನು, ಹೇಮಾವತಿ ಬಲದಂಡೆ ನಾಲೆ ಶಿಥಿಲವಾಗಿರುವುದರಿಂದ 92.104 ಕಿ.ಮೀ ವರೆಗೆ ನಾಲೆ ಆಧುನೀಕರಣ ಕಾಮಗಾರಿಗೆ 422.75 ಕೋಟಿ. ರೂಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಾವಗಡದಲ್ಲಿ 60 ಹಾಸಿಗೆಗಳ ಹೆರಿಗೆ ಆಸ್ಪತ್ರೆಗಳ ನಿರ್ಮಾಣ, ರಾಯಚೂರು ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವುದು, ದಾವಣಗೆರೆಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಹಾಗೂ ಬಳ್ಳಾರಿಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ನಿರ್ಮಿಸುವ ಕಾಮಗಾರಿಗಳಿಗೆ ಒಟ್ಟಾರೆ 71.80 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.