ಬೆಂಗಳೂರು : ಐಪಿಎಲ್ ಜೂಜಿನ ಬಗ್ಗೆ ವಿಧಾನಸಭೆಯಲ್ಲಿ ಇಂದು ಪ್ರಸ್ತಾಪ ಮಾಡಿದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು, ತಕ್ಷಣ ಐಪಿಎಲ್ ಜೂಜು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರೆ, ಇದೇ ವೇಳೆ ಮುಖ್ಯಮಂತ್ರಿ ಮಾತನಾಡಿ, ಪ್ರಮಾಣಿಕ ಪ್ರಯತ್ನಗಳ ಹೊರತಾಗಿಯೂ ಆನ್‌ಲೈನ್ ಜೂಜು ನಿಷೇಧ ಸಾಧ್ಯವಾಗದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ರಮೇಶ್ ಕುಮಾರ್, ಐಪಿಎಲ್ ಹೆಸರಿನಲ್ಲಿ ನಾನಾ ರೀತಿಯಲ್ಲಿ ಜೂಜು ನಡೆಯುತ್ತಿದೆ. ಐಪಿಎಲ್ ಮುಗಿಯುವ ವೇಳೆಗೆ ಹಲವು ಕುಟುಂಬಗಳು ಸರ್ವನಾಶವಾಗುತ್ತವೆ. ಗ್ರಾಮೀಣ ಭಾಗದಲ್ಲಿ ಇಸ್ಪೀಟ್ ದಂಧೆಯೂ ಜೋರಾಗಿದ್ದು, ಶಾಲಾ-ಕಾಲೇಜುಗಳ ಆವರಣದಲ್ಲೇ ರಾಜಾರೋಷವಾಗಿ ನಡೆಯುತ್ತಿದೆ. ಪೊಲೀಸರು ಇದರ ಮೇಲೆ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಗೋವಾದಲ್ಲಿ ಹೆಲಿಕಾಪ್ಟರ್ ಎಂಜಿನ್ MRO ಸೌಲಭ್ಯ ಸ್ಥಾಪಿಸಲು ಶಿಲಾನ್ಯಾಸ
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಸದನದಲ್ಲಿ ಇದೇ ವಿಚಾರ ಏಕೆ ಚರ್ಚೆಗೆ ಬರುತ್ತಿಲ್ಲ ಎಂದು ಕಾಯುತ್ತಿದ್ದೆ. ಜೂಜು ನಿಯಂತ್ರಣಕ್ಕಾಗಿ ಇದ್ದ ಕಾನೂನಿನಲ್ಲಿನ ಲೋಪಗಳನ್ನು ಬಳಸಿಕೊಂಡು ಎಗ್ಗಿಲ್ಲದೆ ಜೂಜು, ಇಸ್ಪೀಟ್ ದಂಧೆ ನಡೆಯುತ್ತಿತ್ತು. ಸಾಮಾಜಿಕ ಕ್ಲಬ್ ಮತ್ತಿತರ ಕಡೆ ರಾಜಾರೋಷವಾಗಿ ನಡೆಯುತ್ತಿತ್ತು. ಏಕೆಂದರೆ, ಪ್ರತ್ಯಕ್ಷವಾಗಿ ಸಿಕ್ಕಿ ಹಾಕಿಕೊಂಡರೂ 500 ರೂ. ದಂಡ ಪಾವತಿಸಿದರೆ ಠಾಣೆಯಲ್ಲೇ ಜಾಮೀನು ದೊರೆಯುತ್ತಿತ್ತು. ಇದಕ್ಕೆ ತಿದ್ದುಪಡಿ ತಂದು ಜೂಜನ್ನು ಪ್ರಜ್ಞಾಪೂರ್ವಕ ಅಪರಾಧ ಕೃತ್ಯವನ್ನಾಗಿ ಮಾಡಿದ್ದೇವೆ. 3-5 ವರ್ಷ ಜೈಲು ಶಿಕ್ಷೆಗೆ ಅವಕಾಶ ಕಲ್ಪಿಸಿದ್ದೇವೆ ಎಂದು ಹೇಳಿದರು.
ಐಪಿಎಲ್, ಆನ್‌ಲೈನ್ ಜೂಜು ನಿಷೇಧಿಸಲು ಹಲವು ಅಡೆ-ತಡೆಗಳ ನಡುವೆಯೂ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಆದರೆ, ನ್ಯಾಯಾಲಯದಲ್ಲಿ ಮತ್ತೆ ಜೂಜು ಆಧಾರಿತ ಆನ್ ಲೈನ್ ಗೇಮ್‌ಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅವರು ಅಷ್ಟರ ಮಟ್ಟಿಗೆ ಪ್ರಭಾವ ಶಾಲಿಗಳು. ವಿಧೇಯಕ ಮಂಡಿಸುವ ವೇಳೆ ನನ್ನ ಮೇಲೆಯೇ ತೀವ್ರ ಪ್ರಭಾವ ಬೀರಿದ್ದರು. ಒಬ್ಬ ವ್ಯಕ್ತಿಯಂತೂ ನನ್ನ ಕ್ಷೇತ್ರಕ್ಕೆ ಒಂದು ಲಕ್ಷ ಕೊರೊನಾ ಲಸಿಕೆ ಉಚಿತವಾಗಿ ಕೊಡುತ್ತೇನೆ ಎಂದಿದ್ದರು. ಆದರೂ ಯಾವುದೇ ಪ್ರಭಾವಗಳಿಗೂ ಮಣಿಯದೆ ಕಾನೂನು ತಂದೆವು. ಆದರೆ ಅದು ಉಪಯೋಗವಾಗಲಿಲ್ಲ ಎಂದು ಮುಖ್ಯಮಂತ್ರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.