ಬೆಂಗಳೂರು: ರಾಜ್ಯಾದ್ಯಂತ ಆಗಸ್ಟ್ 28, 29, 30 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ( ಸಿಇಟಿ) ನಡೆದಿದೆ. ಇದೀಗ ಭೌತಶಾಸ್ತ್ರ, ರಸಾಯನಶಾಸ್ತ್ರ ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ತಾತ್ಕಾಲಿಕ ಸರಿ ಉತ್ತರಗಳನ್ನು( KEY ANSWER) ಪ್ರಾಧಿಕಾರದ ವೆಬ್ ಸೈಟ್ (http:/keakar.nic.in) ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.
ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ನಾಳೆ( ಸೆಪ್ಟೆಂಬರ್ 4) ಸಂಜೆ 5:30 ರೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ವಿಷಯದ ಹೆಸರು, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಮತ್ತು ನಿರ್ದಿಷ್ಟವಾದ ನಿಗದಿತ ಆಕ್ಷೇಪಣೆಯನ್ನು ಎಲ್ಲಾ ವಿವರಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ.
ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದೇ ಅಥವಾ ಆಧಾರ ರಹಿತ ಸಲ್ಲಿಸುವ ಆಕ್ಷೇಪಗಳನ್ನು ಪರಿಗಣಿಸುವುದಿಲ್ಲ ಅಂತಾ ಕೆಇಎ ತಿಳಿಸಿದೆ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ನೀಡುವ ಕೀ ಉತ್ತರಗಳು ಅಂತಿಮವಾಗಿರಲಿದೆ. ಇನ್ನು ಆಕ್ಷೇಪಣೆಗಳ ವಿವರಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಲು ಸೂಚಿಸಿದೆ.
ಪ್ರಮಾಣ ಪತ್ರ ಸಲ್ಲಿಸಲು ಅವಕಾಶ
ಸಿಇಟಿ- 2021ನೇ ಸಾಲಿಗೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ವಿಶೇಷ ಪ್ರ - ವರ್ಗದ ಅಡಿ ಅರ್ಹತೆ ಪಡೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು, ನಿಗದಿತ ದಿನಾಂಕಗಳಂದು ವಿಶೇಷ ಪ್ರ-ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಸೆಪ್ಟೆಂಬರ್ 6 ಅಥವಾ 7 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ವರ್ಗವನ್ನು ಕ್ಲೇಮ್ ಮಾಡಿದ್ದಲ್ಲಿ ಮಾತ್ರ ವಿಶೇಷ ಪ್ರ- ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅರ್ಹತೆ ಪಡೆಯಲಿದ್ದಾರೆ. ಸಲ್ಲಿಸಬೇಕಾದ ವಿಶೇಷ ವರ್ಗದ ಪ್ರಮಾಣ ಪತ್ರಗಳ ವಿವರಗಳಿಗಾಗಿ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಬಹುದು.
ದಾಖಲೆ ಬದಲಾವಣೆಗೆ ಅವಕಾಶ
ಆನ್‌ಲೈನ್ ಮೂಲಕ ದಾಖಲಿಸಿರುವ ಮಾಹಿತಿಯನ್ನು ಬದಲಾವಣೆ ಮಾಡಲು ಅಂತಿಮ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳ ಕೋರಿಕೆ ಮೇರೆಗೆ ಸಿಇಟಿ -2021ಕ್ಕೆ ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳಲ್ಲಿನ ಮಾಹಿತಿಯನ್ನು ಅರ್ಹತೆಗೆ ಅನುಗುಣವಾಗಿ ಮಾರ್ಪಡಿಸಲು ಸೆಪ್ಟೆಂಬರ್ 1 ರಿಂದ 5 ನೇ ತಾರೀಖಿನ ರಾತ್ರಿ 8 ಗಂಟೆವರೆಗೆ ಅವಕಾಶವಿದೆ.
ಅಭ್ಯರ್ಥಿಗಳು, ತಾವು ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ದಾಖಲಿಸಿರುವ ವಿವರಗಳನ್ನು ಮಾರ್ಪಡಿಸಿಕೊಳ್ಳುವ ಮೊದಲು ಅರ್ಜಿಯಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಪರಿಶೀಲಿಸಿ ನಂತರ ಮಾರ್ಪಡಿಸಿಕೊಳ್ಳಲು ಸೂಚಿಸಿದೆ.
ಮಾರ್ಪಡಿಸಿಕೊಂಡ ನಂತರ ತಪ್ಪದೇ Declaration button ಅನ್ನು ಆಯ್ಕೆ ಮಾಡಿ ನಂತರ Final Submission ಅನ್ನು ಸಲ್ಲಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮಾರ್ಪಡಿಸಿದ ಬಳಿಕ ಅರ್ಜಿಯ ಒಂದು ಕಾಪಿಯನ್ನು ನೀವಿಟ್ಟುಕೊಳ್ಳಬೇಕು. ತಪ್ಪಿದಲ್ಲಿ ಅಭ್ಯರ್ಥಿಗಳು ಅರ್ಜಿಯಲ್ಲಿ ಮೊದಲು ಸಲ್ಲಿಸಿದ ಮಾಹಿತಿಯನ್ನೇ ಮುಂದಿನ ಎಲ್ಲಾ ಪ್ರಕ್ರಿಯೆಗೆ ಪರಿಗಣಿಸಲಾಗುತ್ತೆ.
ಪ್ರಮುಖವಾಗಿ ಅಭ್ಯರ್ಥಿಯ ಹೆಸರು, ತಾಯಿ-ತಂದೆಯ ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ರಾಷ್ಟ್ರೀಯತೆ - ಈ ವಿವರಗಳನ್ನು ತಿದ್ದುಪಡಿ/ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ.