ಬೆಂಗಳೂರು: ಒಂಬತ್ತು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಚರಂಡಿಯಲ್ಲಿ ದೊರೆತಿದೆ. ಮಾರ್ಕಂಡೇಯ ನಗರದ ಚರಂಡಿ ಸ್ವಚ್ಚಗೊಳಿಸುವಾಗ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಮಧುಸೂದನ್(33) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾರ್ಕಂಡೇಯ ನಗರದ ನಿವಾಸಿಯಾಗಿರುವ ಮಧುಸೂದನ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಇವರನ್ನು ಫೆ.19ರಂದು ಚರಂಡಿ ಸೆಂಟ್ರಿಂಗ್ಗಾಗಿ ಮೇಸ್ತ್ರಿಯೊಬ್ಬರು ನೇಮಿಸಿಕೊಂಡಿದ್ದರು. ವಿಪರ್ಯಾಸವೆಂದರೆ, ಅದೇ ದಿನ ಪತಿ ಕಾಣೆಯಾಗಿರುವುದಾಗಿ ಪತ್ನಿ ಜೆ.ಜೆ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಚರಂಡಿಯಲ್ಲಿ ಸ್ಲ್ಯಾಬ್ ತೆಗೆದು ಸ್ವಚ್ಚಗೊಳಿಸುವಾಗ ಮೋರಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಛಾವಣಿ ಕುಸಿದು ಕಾರ್ಮಿಕ ಸಾವು: ದರ್ಗಾ ನೆಲಸಮಗೊಳಿಸುವಾಗ ಛಾವಣಿ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟರೆ, ಮತ್ತೋರ್ವ ಕಾರ್ಮಿಕ ಗಾಯಗೊಂಡಿರುವ ಘಟನೆ ನ್ಯೂ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಹಜರ್ ಉಲ್ ಹಕ್ ಮೃತಪಟ್ಟ ಕಾರ್ಮಿಕ. ಗಾಯಗೊಂಡಿರುವ ಮತ್ತೊಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ, ಆತನದ್ದೇ ಮನೆಯಲ್ಲಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆ