ಬೆಂಗಳೂರು: ನಭೋಮಂಡಲದಲ್ಲಿ ಗುರು ಮತ್ತು ಶನಿ ಗ್ರಹಗಳೆರಡು ಸಮಾಗಮವಾಗುವ ಅಪರೂಪದ ದೃಶ್ಯವನ್ನು ಸೋಮವಾರ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ವಿಜ್ಞಾನಾಸಕ್ತರು ವೀಕ್ಷಿಸಿದರು.
ಅಪರೂಪಕ್ಕೆ ನಭೋಮಂಡಲದಲ್ಲಿ 800 ವರ್ಷಗಳ ನಂತರ ಈ ಕೌತುಕ ನಡೆಯುತ್ತಿದ್ದು ಎರಡೂ ಗ್ರಹಗಳು ಹತ್ತಿರವಾಗುತ್ತಿದ್ದ ದೃಶ್ಯಕ್ಕೆ ವಿಜ್ಞಾನಿಗಳು ಗ್ರೇಟ್ ಕಂಜಕ್ಷನ್ ಎಂದು ಕರೆದಿದ್ದಾರೆ. ಭಾನುವಾರ ಅನೇಕ ಮಂದಿ ಕೌತುಕದ ಗ್ರಹಗಳನ್ನು ವೀಕ್ಷಿಸಿದ್ದರು.
ಸೋಮವಾರ ನೆಹರು ತಾರಾಲಯದಲ್ಲಿ ವೀಕ್ಷಿಸಲು ಸಕಲ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಹಿನ್ನೆಲೆ ಆನ್‌ಲೈನ್ ಮುಖಾಂತರ ನೋಂದಾಯಿಸಿದವರಿಗೆ ಮಾತ್ರ ತಾರಾಲಯದ ಆವರಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಪರೂಪದ ವಿಸ್ಮಯವನ್ನು ಕಾಣಲು ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ಅನೇಕ ಮಂದಿ ಆಗಮಿಸಿ ಕಣ್ತುಂಬಿಕೊಂಡರು.
ಇದನ್ನೂ ಓದಿ: ಗುರು-ಶನಿ ಸಮಾಗಮ : ಇಂದು ಸಂಜೆ ಆಗಸದಲ್ಲಿ ಕೌತುಕ
ಗುರುವಾರದವರೆಗೆ ಗ್ರಹಗಳು ಹತ್ತಿರದಲ್ಲಿರಲಿದ್ದು ಅಮೆರಿಕಾ ಮತ್ತು ಯುರೋಪ್ ದೇಶಗಳಲ್ಲಿ 15-20 ನಿಮಿಷಗಳ ಕಾಲ ಮಾತ್ರ ಇದು ಗೋಚರಿಸಲಿದೆ. ಭಾರತದಲ್ಲಿ ಡಿ.19 ರಿಂದ ಡಿ.24 ರವರೆಗೂ ಕಾಣಿಸುವ ಸಂಭವವಿದೆ ಎಂದು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ವಿವರಿಸಿದ್ದಾರೆ.
ಇದು ಬಹಳ ಕುತೂಹಲಕಾರಿ ವಿದ್ಯಮಾನ. ಇಡೀ ವಿಶ್ವವೇ ಈ ವಿದ್ಯಮಾನವನ್ನ ನೋಡುತ್ತಿದೆ. ಭೂಮಿಯಿಂದ ಗುರು-ಶನಿ ಬಹಳ ಹತ್ತಿರದಿಂದ ಗೋಚರವಾಗುತ್ತಿದೆ. ನೆಹರೂ ತಾರಾಲಯದಲ್ಲಿ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಹಲವು ವರ್ಷಗಳ ನಂತರ ಇಂದು ಈ ವಿದ್ಯಮಾನ ಮತ್ತೆ ಮರುಕಳಿಸಿದೆ. ನಾನು ಕೂಡ ಟೆಲಿಸ್ಕೋಪ್ ಮೂಲಕ ಗುರು-ಶನಿ ಗ್ರಹ ನೋಡಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದರು.
ಆಡಳಿಧಿಕಾರಿ ರಾಜನ್ ಸೇರಿದಂತೆ ಇತರ ವಿಜ್ಞಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಬಹಳಷ್ಟು ಜನ ದೂರದರ್ಶಕದಲ್ಲಿ ನೋಡಲಾಗದೆ ನಿರಾಸೆಗೊಂಡಿದ್ದು, ತಕ್ಷಣ ಪ್ರತಿಕ್ರಿಯಿಸಿದ ತಾರಾಲಯದ ಆಡಳಿತ ಮಂಡಳಿ, ಇನ್ನೂ ಮೂರು ದಿನ ಸಂಜೆ 6.30 ರಿಂದ 7.30 ರವರೆಗೆ ಜನರು ಬಂದು ವೀಕ್ಷಿಸುವುದಕ್ಕೆ ಅನುವು ಮಾಡಿ ಕೊಡುವುದಾಗಿ ತಿಳಿಸಿದೆ.