ಬೆಂಗಳೂರು: ಕಳೆದ ಮೂರು ದಿನಗಳಿಂದ ನಗರದಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ಮರಗಳು ಧರೆಗರುಳಿ ಅಪಾರ ಆಸ್ತಿ, ಪಾಸ್ತಿಗೆ ಹಾನಿಯುಂಟಾಗಿತ್ತು. ಮನೆಮುಂದಿರೋ ಮರಗಳು ಬಿದ್ದು ವಿದ್ಯುತ್ ಕಡಿತ, ವಾಹನಗಳು ಜಖಂ ಆಗಿದ್ರೂ ಮರಗಳನ್ನ ತೆರವು ಮಾಡೋದಕ್ಕೆ ಬಿಬಿಎಂಪಿ ಸಿಬ್ಬಂದಿ ಮಾತ್ರ ಮೀನಮೇಷ ಎಣಿಸ್ತಿದ್ರು.
ಇದ್ರಿಂದ ವಾಹನ ಸವಾರರಿಗೆ, ಮನೆಮಂದಿಗೆಲ್ಲ ಸಾಕಷ್ಟು ಸಮಸ್ಯೆಯುಂಟಾಗಿತ್ತು. ಇಂದು ಬೆಳಗ್ಗೆ ಪಾಲಿಕೆ ಅಧಿಕಾರಿಗಳು, ಸ್ಥಳೀಯ ಶಾಸಕರ ಜೊತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂರು ದಿನಗಳ ಹಿಂದೆಯೇ ಮರ ಬಿದ್ದಿದ್ದರೂ, ತೆರವು ಮಾಡದೇ ನಿರ್ಲಕ್ಷ್ಯ ವಹಿಸಿದ್ದ ಪಾಲಿಕೆ, ಅರಣ್ಯ ಘಟಕದ ಸಿಬ್ಬಂದಿ ಇಂದು ತರಾತುರಿಯಲ್ಲಿ ಧರೆಗುರುಳಿದ ಮರ, ರಂಬೆ, ಕೊಂಬೆಗಳನ್ನು ತೆರವು ಮಾಡತೊಡಗಿದ್ದರು. ಮಳೆಹಾನಿ ಪ್ರದೇಶಗಳಾದ ವಿಜಯನಗರ, ಮಲ್ಲೇಶ್ವರ, ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಡಿಸಿಎಂ ಪರಿಶೀಲನೆ ನಡೆಸಿ, ನೆಲಕ್ಕುರುಳಿದ ರೆಂಬೆಗಳನ್ನು ಕೂಡಲೇ ತೆರವು ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ಜೊತೆಗೆ ಮಳೆಯಿಂದಾಗಿ ವಿದ್ಯುತ್ ಲೈನ್ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸುವಂತೆಯೂ ಬೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು. ಬಳಿಕ ಮಾತನಾಡಿದ ಡಿಸಿಎಂ, ಕಳೆದ ಎರಡು ದಿನದಿಂದ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, 500ಕ್ಕೂ ಹೆಚ್ಚು ಮರಗಳು ಹಾನಿಯಾಗಿವೆ. 100 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ರಾಜ್ಯದ ಕೆಲವೆಡೆ 120 ಮೀ.ಮೀ ಗೂ ಅಧಿಕ ಮಳೆಯಾಗಿದೆ. ಬಿರುಗಾಳಿ ಇದ್ದ ಕಾರಣ ಹೆಚ್ಚು ಮರಗಳು ನೆಲಕ್ಕುರುಳಿವೆ. ಮರಗಳ ತೆರವು, ವಿದ್ಯುತ್ ಲೈನ್ ಸರಿಪಡಿಸುವುದು ಸೇರಿ ಇತರ ಮಳೆ ಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಇತರ ಇಲಾಖೆಗಳ 61 ತಂಡಗಳು ಕೆಲಸ ಮಾಡುತ್ತಿವೆ ಎಂದರು.
ಆದರೆ, ಬೆಸ್ಕಾಂ ಹಾಗೂ ಬಿಬಿಎಂಪಿ ನಡುವೆ ಹೊಂದಾಣಿಕೆ ಕೊರತೆಯಾಗುತ್ತಿದ್ದು, ಇದರಿಂದ ಸಾರ್ವಜನಿಕರ ಸಮಸ್ಯೆಗಳು ಬೇಗ ಇತ್ಯರ್ಥಗೊಳ್ಳುತ್ತಿಲ್ಲ. ಮೂರು ದಿನದಿಂದ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಕರೆಂಟ್ ಇಲ್ಲ, ಎರಡು ದ್ವಿಚಕ್ರ ವಾಹನ ಹಾಗೂ ಕಾರುಗಳು ಜಖಂ ಆಗಿವೆ, ಆದರೂ ಯಾರೂ ಜವಾಬ್ದಾರಿ ತೆಗೆದುಕೊಂಡು ಬಿದ್ದ ಮರ ತೆರವು ಮಾಡಿಲ್ಲ ಎಂದು ಸ್ಥಳೀಯರಾದ ನಿತೇಶ್ ಜೈನ್ ನೋವು ತೋಡಿಕೊಂಡರು.