ಬೆಂಗಳೂರು: ನಗರದಲ್ಲಿನ ಅಪಾರ್ಟ್ಮೆಂಟ್ಗಳ ಸಮಸ್ಯೆಗಳ ಸಂಬಂಧ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಭರವಸೆ ನೀಡಿದ್ದಾರೆ.
ನಗರದ ಬೆಂಗಳೂರು ಅಪಾರ್ಟ್‍ಮೆಂಟ್ ಒಕ್ಕೂಟದ ಪ್ರತಿನಿಧಿಗಳ ಜತೆ ಡಿಸಿಎಂ ವಿಡಿಯೋ ಸಂವಾದ ನಡೆಸಿದರು. ಇನ್ನು ಮುಂದೆ ತಿಂಗಳಲ್ಲಿ ಅರ್ಧ ಗಂಟೆ ಕಾಲ ಅವರ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ನಗರದ 700 ಅಪಾರ್ಟ್‍ಮೆಂಟ್‍ಗಳು ಈ ಒಕ್ಕೂಟದಲ್ಲಿ ಸದಸ್ಯತ್ವ ಪಡೆದಿವೆ. ಒಂದೊಂದು ಕಡೆ ಒಂದೊಂದು ರೀತಿಯ ಸಮಸ್ಯೆಗಳು ಇದ್ದು, ಆ ಬಗ್ಗೆ ಚರ್ಚಿಸಿ, ಪರಿಹಾರ ಕಲ್ಪಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಭರವಸೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಜನಜಾಗೃತಿ ಮೂಡಿಸುವುದರ ಜತೆಗೆ ಕೃಷಿ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸುವುದರ ಮೂಲಕ ಅಪಾರ್ಟ್‍ಮೆಂಟ್ ನಿವಾಸಿಗಳು ಮಾದರಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಡಿಯೋ ಸಂವಾದದಲ್ಲಿ ಒಕ್ಕೂಟದ ಅಧ್ಯಕ್ಷ ನಾಗರಾಜ ರಾವ್, ಪ್ರಧಾನ ಕಾರ್ಯದರ್ಶಿ ವಿಕ್ರಮ್ ಸೇರಿದಂತೆ ಇತರರು ಮಾತನಾಡಿದರು. ವಾರ್ಡ್ ಸಮಿತಿಗಳಲ್ಲಿ ಅಪಾರ್ಟ್‍ಮೆಂಟ್ ನಿವಾಸಿಗಳನ್ನೂ ಸದಸ್ಯರನ್ನಾಗಿ ಮಾಡಬೇಕು, ಬೆಂಗಳೂರು ಸಮುದಾಯ ಕಾರ್ಯಪಡೆ ರಚಿಸುವಂತೆಯೂ ಅವರು ಆಗ್ರಹಿಸಿದರು.