ಬೆಂಗಳೂರು: ತಂತ್ರಜ್ಞಾನ ಮೇಳದಲ್ಲಿ ಇಂದು ಯುಕೆ ಜೊತೆಗಿನ ಒಡಂಬಡಿಕೆಗೆ ಪೂರ್ವಭಾವಿಯಾಗಿ ಯುಕೆ ಹೈಕಮಿಷನರ್ ಜೆರೆಮಿ ಪಿಲ್ಮೋರ್ ಬೆಡ್ಫೋರ್ಡ್ ಅವರೊಂದಿಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಸಮಾಲೋಚನೆ ನಡೆಸಿದರು.
ಯುಕೆ ಮತ್ತು ಭಾರತದ ಸಂಬಂಧ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಟೆಕ್ ಸಮ್ಮಿಟ್ ಹಸಿರು ಮತ್ತು ಸ್ವಚ್ಛ ತಂತ್ರಜ್ಞಾನದ ಬಗ್ಗೆ ವಿಚಾರ ಗೋಷ್ಠಿ ನಡೆದಿದ್ದು, ಹಸಿರು ತಂತ್ರಜ್ಞಾನ ಯುಕೆ ದೇಶದ ಪ್ರಾಮುಖ್ಯತೆಯಾಗಿದೆ. ಕರ್ನಾಟಕ ಮತ್ತು ಇಂಗ್ಲೆಂಡ್ ದೇಶ ಒಟ್ಟಿಗೆ ಕೆಲಸ ಮಾಡುವುದು ಮುಂದುವರೆಯಲಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಬಲಪಡಿಸಿಕೊಂಡು ಬೆಳೆಯಲಿದ್ದೇವೆ. ಸೃಜನಶೀಲ ತಂತ್ರಜ್ಞಾನ, ಡೇಟಾ ವಿಜ್ಞಾನ, ಕೃತಕ ಬುದ್ಧಿಮತ್ತೆ, ನಿಯಂತ್ರಕ ಸ್ಯಾಂಡ್ ಬಾಕ್ಸ್ಗಳಲ್ಲಿ ಯುಕೆ ಮತ್ತು ಕರ್ನಾಟಕ ಜೊತೆಯಾಗಿ ಕೆಲಸ ಮಾಡಲಿವೆ ಎಂದು ಡಿಸಿಎಂ ತಿಳಿಸಿದರು.
ಕರ್ನಾಟಕ-ಕೇರಳ ಮೂಲದ ಯುಕೆ ಡೆಪ್ಯೂಟಿ ಹೈಕಮಿಷನರ್ ಜೆರೆಮಿ ಪಿಲ್ಮೋರ್ ಬೆಡ್ಫೋರ್ಡ್ ಮಾತನಾಡಿ, ಕೋವಿಡ್ ನಂತರದ ಕಾಲಮಾನದಲ್ಲಿ ಹಸಿರು ತಂತ್ರಜ್ಞಾನ ಯುಕೆಯ ಮಹತ್ವಾಕಾಂಕ್ಷೆಗಳಲ್ಲಿ ಒಂದಾಗಿದೆ. ಹೊಸ ಸ್ಟಾರ್ಟ್ ಅಪ್, ಭಾರತ ಹಾಗೂ ಯುಕೆ ಕಂಪನಿಗಳು ಹವಾಮಾನ ಬದಲಾವಣೆ ಹಾಗೂ ಮುಂದಿನ ಪೀಳಿಗಿಯ ಸುರಕ್ಷತೆಗಾಗಿ ಕೆಲಸ ಮಾಡಲಿವೆ ಎಂದು ತಿಳಿಸಿದರು.