ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಹೊಸ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಳೆಷ್ಟು?, ಯಾರಿಗೆ ಸಿಗಲಿದೆ ಡಿಸಿಎಂ ಸ್ಥಾನ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಡಿಸಿಎಂ ಹುದ್ದೆಯ ಅದೃಷ್ಟ ಯಾರಿಗೆ ಸಿಗಲಿದೆ ಎಂಬುವುದು ಕುತೂಹಲ ಮೂಡಿಸಿದೆ.
ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಡಾ.ಸಿ.ಎಸ್.ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದವರು. ಇವರು ಮತ್ತೆ ಆ ಸ್ಥಾನ ಪಡೆದುಕೊಳ್ಳುತ್ತಾರಾ? ಅಥವಾ ಹೊಸ ಮುಖಗಳಿಗೆ ಹೈಕಮಾಂಡ್ ಮಣೆ ಹಾಕುತ್ತಾ? ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಪ್ರಸ್ತುತ ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು ಅವರ ಹೆಸರುಗಳು ಡಿಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿವೆ. ಇದರ ಜೊತೆಗೆ ಮಹಿಳೆಗೂ ಡಿಸಿಎಂ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ಬಾರಿ ಕೆಲವು ಹೊಸ ಮುಖಗಳಿಗೂ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಚಿವ ಸಂಪುಟ ರಚನೆ ದಿನಾಂಕ ಇಂದು ಸಂಜೆ ನಿಗದಿಯಾಗುವುದು ಬಹುತೇಕ ಖಚಿತವಾಗಿದ್ದು, ಬುಧವಾರ ಅಥವಾ ಗುರುವಾರ ಪ್ರಮಾಣವಚನ ನಡೆಯುವ ಸಾಧ್ಯತೆ ಇದೆ. ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಿನ್ನೆ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಸಂಪುಟ ರಚನೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇಂದು ಸಂಜೆ ವೇಳೆಗೆ ನೂತನ ಸಚಿವರ ಪಟ್ಟಿ ಅಂತಿಮಗೊಳಿಸಿ ವರಿಷ್ಠರೇ ಘೋಷಣೆ ಮಾಡಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಲಿಷ್ಠ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ಪ್ಲ್ಯಾನ್ ಮಾಡುತ್ತಿದೆ. ಅದೇ ರೀತಿ ಡಿಸಿಎಂ ಸ್ಥಾನಕ್ಕೂ ಅಳೆದೂ ತೂಗಿ ಆಯ್ಕೆ ಮಾಡಲಾಗುತ್ತಿದೆ.
ಲಿಂಗಾಯತರು ಸಿಎಂ ಆಗಿರುವುದರಿಂದ ಯಾವ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡಬೇಕೆಂಬುದರ ಬಗ್ಗೆ ಹೈಕಮಾಂಡ್ ಲೆಕ್ಕಾಚಾರ ಹಾಕುತ್ತಿದೆ.
ಒಕ್ಕಲಿಗರು, ದಲಿತ ಸಮುದಾಯಕ್ಕೆ ಡಿಸಿಎಂ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ನಾಲ್ಕು ಡಿಸಿಎಂ ಸೃಷ್ಟಿ ಮಾಡಿದರೆ ಹಿಂದುಳಿದ ವರ್ಗ ಹಾಗೂ ಒಬ್ಬರು ಮಹಿಳೆಗೆ ಕೊಡುವ ಸಾಧ್ಯತೆ ಇದೆ.
ಡಿಸಿಎಂ ನೇಮಕ ಡೌಟ್: ಈ ನಡುವೆ ಬಸವರಾಜ ಬೊಮ್ಮಾಯಿ ಅವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿಕೊಳ್ಳುವರೇ ಎಂಬ ಚರ್ಚೆ ಸಹ ಆರಂಭವಾಗಿದೆ. ಹಲವು ನಾಯಕರು ಡಿಸಿಎಂ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಬೆನ್ನಲ್ಲೇ, ಬಿಜೆಪಿ ಹೈಕಮಾಂಡ್ ಯಾವುದೇ ಡಿಸಿಎಂ ನೇಮಕ ಮಾಡುವುದಿಲ್ಲ ಎಂದು ಹೇಳಿದೆ. ಇದರ ಜೊತೆಗೆ ಬೊಮ್ಮಾಯಿ ಅವರು ಕೂಡ ಡಿಸಿಎಂ ಗಳ ನೇಮಕ ಮಾಡಲು ಉತ್ಸಾಹ ತೋರಿಸುತ್ತಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿತ್ತು. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕತ್ವವನ್ನು ಬೆಳೆಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಬಿಎಸ್ವೈ ರಾಜೀನಾಮೆ ಸಮಯ ಬಂದಾಗ ಡಿಸಿಎಂ ಸ್ಥಾನದಲ್ಲಿ ಇರುವವರು ಸಿಎಂ ಹುದ್ದೆಗೆ ಬರುತ್ತಾರೆ ಎಂಬ ಲೆಕ್ಕಾಚಾರ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಒಂದು ವೇಳೆ ಈ ಬಾರಿಯೂ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಪ್ರಾದೇಶಿಕ, ಜಾತಿ ಮತ್ತು ಸಮುದಾಯದ ಸಮತೋಲನ ಸಾಧಿಸಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕು. ಡಿಸಿಎಂ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿ ಈ ಬಾರಿ ಶ್ರೀರಾಮುಲು, ಆರ್. ಅಶೋಕ್, ಅರವಿಂದ ಲಿಂಬಾವಳಿ ಹೆಸರು ಇದೆ.
ಇದರ ಮಧ್ಯೆ ನಾನೂ ಸಹ ಡಿಸಿಎಂ ಸ್ಥಾನದ ಆಕಾಕ್ಷಿ ಎಂದು ಕೆ.ಎಸ್. ಈಶ್ವರಪ್ಪ ಪರೋಕ್ಷವಾಗಿ ಹೇಳಿದ್ದಾರೆ. ಜೊತೆಗೆ ಕುರುಬ ಸಮುದಾಯದ ಸ್ವಾಮೀಜಿಗಳೂ ಸಹ ಈಶ್ವರಪ್ಪನವರಿಗೆ ಡಿಸಿಎಂ ಸ್ಥಾನ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಸ್ಥಾನ ಇರುತ್ತದಾ? ಇದ್ದರೂ ಯಾರಿಗೆ ಸಿಗಲಿದೆ ಪಟ್ಟ ಎಂಬುವುದರ ಸ್ಪಷ್ಟ ಚಿತ್ರಣ ಇಂದು ರಾತ್ರಿ ಸಿಗುವ ಸಾಧ್ಯತೆ ಇದೆ.