ಬೆಂಗಳೂರು: ಕೊಳಚೆ ನೀರು ಶುದ್ಧೀಕರಣ ಘಟಕದ ಟ್ಯಾಂಕ್ ಮೇಲ್ಛಾವಣಿ ಕುಸಿದ ಪ್ರಕರಣದ ತನಿಖೆಯನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ. ಇದರ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.
ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್ ನ ಎಸ್‌ಟಿಪಿ ವಾಟರ್ ಟ್ಯಾಂಕ್ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೆ, ಈ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಮಗಾರಿ ನಡೆಯುತ್ತಿರುವ ವೇಳೆ ಇಬ್ಬರು ಎಂಜಿನಿಯರ್ಸ್ ಹಾಗೂ ಓರ್ವ ಸೂಪರ್ವೈಸರ್ ಸಾವನ್ನಪ್ಪಿರುವುದು ದುರದೃಷ್ಟಕರ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗಕ್ಕೆ ಇಲಾಖೆಯಿಂದ ಪರಿಹಾರ ನೀಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಈ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಕಾಮಗಾರಿ ದೇಶದ ಎರಡನೇ ಅತಿ ದೊಡ್ಡ ಕಾಮಗಾರಿಯಾಗಿದೆ. ಶೀಘ್ರವೇ ಇದನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯ ನಿರ್ದೇಶನ ನೀಡಲಾಗಿತ್ತು. ಈ ಅವಧಿಯಲ್ಲಿ ಇಂಥ ದುರ್ಘಟನೆ ನಡೆದಿದ್ದು ಬೇಸರ ತರಿಸಿದೆ ಎಂದು ಡಿಸಿಎಂ ವಿಷಾದ ವ್ಯಕ್ತಪಡಿಸಿದರು.
ಯಾವ ಕಾರಣದಿಂದ ದುರಂತ ಸಂಭವಿಸಿದೆ ಅನ್ನೋದು ತನಿಖೆ ಪೂರ್ಣಗೊಂಡ ಬಳಿಕ ತಿಳಿಯಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಕೇಂದ್ರದ ಇಲಾಖೆಯಿಂದಲೂ ತಾಂತ್ರಿಕ ದೋಷದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆ ದಿನ ಯಾರೆಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ, ಯಾಕೆ ಮುಂಜಾಗೃತೆ ತೆಗೆದುಕೊಂಡಿಲ್ಲ , ಈ ಬೇಜವಾಬ್ದಾರಿಗೆ ಯಾರು ಹೊಣೆ ಈ ಎಲ್ಲಾ ಅಂಶಗಳನ್ನು ಸಹ ಇಲಾಖೆ ಒಳಗೆ ತನಿಖೆ ಮಾಡಲಾಗುವುದು. ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಪರಮೇಶ್ವರ್ ಭರವಸೆ ನೀಡಿದ್ದಾರೆ.
ಇನ್ನು ಬೆಳ್ಳಂದೂರು ಬಳಿ ಇರುವ ಕೊಳಚೆ ನೀರು ಸಂಸ್ಕರಣ ಘಟಕದಿಂದ ನೀರು ಶುದ್ಧೀಕರಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಕೂಡಾ ಕಾಮಗಾರಿ ಮಾಡಲಾಗುತ್ತಿದೆ. ಇದಕ್ಕಾಗಿ 365 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇನ್ನು ಸಾಕಷ್ಟು ಕಾಮಗಾರಿ ಪೂರ್ಣಗೊಳ್ಳುವುದು ಬಾಕಿ ಇದೆ. ಉಳಿದಿರುವ ಕಾಮಗಾರಿಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಲು ಸೂಚಿಸಿರುವುದಾಗಿ ಹೇಳಿದ್ದಾರೆ.
ಗರಂ ಆದ ಡಿಸಿಎಂ: ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಡಿಸಿಎಂ, ಈ ಘಟನೆಗೆ ಯಾರು ಹೊಣೆ? ಚೀಫ್ ಎಂಜಿನಿಯರ್ ನೀವು ಆ ಸ್ಥಳದಲ್ಲಿ ಇದ್ದರಾ? ಚೀಫ್ ಇಂಜಿನಿಯರ್ ಆದವರು ಮುಂದಾಳತ್ವ ವಹಿಸಿ ಕೆಲಸ ಮಾಡಿಸಬೇಕು. ನೀವೇ ಹೋಗಿಲ್ಲ ಅಂದ್ರೆ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತೀರಾ? ಇಲಾಖೆಗೆ ಒಳ್ಳೆಯ ಹೆಸರು ಇದೆ. ಇಂಥ ಘಟನೆಯಿಂದ ಮುಂದೆ ಕಾಮಗಾರಿಗೆ ಯಾರು ಬರುತ್ತಾರೆ? ಇಲಾಖೆ ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ಕೆಟ್ಟ ಹೆಸರು ಇಲಾಖೆಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದರು. ಈ ಘಟನೆಗೆ ಕಾರಣ ಯಾರೇ ಆಗಲಿ ಕಠಿಣ ಕ್ರಮ ಆಗಬೇಕು. ಇಲಾಖೆಯಲ್ಲಿ ಇಂಥ ಬೇಜವಾಬ್ದಾರಿಯನ್ನು ಎಂದೂ ಸಹಿಸಲ್ಲವೆಂದು ಪರಮೇಶ್ವರ್ ಸಿಡಿಮಿಡಿಗೊಂಡರು.