ಬೆಂಗಳೂರು ಅನುಪಯುಕ್ತ ಬಸ್ ಅನ್ನು ಬಳಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ನಿರ್ಮಿಸಿದ ವಿಶಿಷ್ಟ 'ಸ್ತ್ರೀ ಶೌಚಾಲಯ'ವನ್ನು ಸಾರಿಗೆ ಸಚಿವ ಲಕ್ಷಣ ಸವದಿ ಉದ್ಘಾಟಿಸಿದರು.
ಈ ವಿಶೇಷ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರ, ಇನ್ಸಿನರೇಟರ್, ಮಗುವಿನ ಡೈಪರ್ ಬದಲಿಸುವುದಕ್ಕೆ ಸ್ಥಳಾವಕಾಶ, ಇಂಡಿಯನ್ ಮತ್ತು ವೆಸ್ಟರ್ನ್ ರೀತಿಯ ಶೌಚಾಲಯಗಳು, ವಾಶ್ ಬೇಸಿನ್ಗಳು, ಸೆನ್ಸಾರ್ ಲೈಟ್ ಮತ್ತು ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಈ ಯೋಜನೆ ಮಹಿಳಾ ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮದಲ್ಲಿಯೇ ಪ್ರಪ್ರಥಮ ಬಾರಿಗೆ ಅನುಪಯುಕ್ತ ಬಸ್‌ನಲ್ಲಿ ಇಂತಹ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ.
ಶೌಚಾಲಯ ಉದ್ಘಾಟಿಸಿ ಮಾತನಾಡಿದ ಸಚಿವ ಸವದಿ, ನಿಗಮವು ಹಲವು ಮಹಿಳಾ ಸ್ನೇಹಿ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಸ್ ನಿಲ್ದಾಣ ಹಾಗೂ ಬಸ್ಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿಗಮದ ಪ್ರಥಮ ಆದ್ಯತೆಯಾಗಿದ್ದು, ಕೋವಿಡ್ - 19 ಸಂದರ್ಭದಲ್ಲಿ ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯದ ಪ್ರಾರಂಭ ಮಾದರಿಯಾಗಲಿದೆ. ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿಯ ಪ್ರಯತ್ನವನ್ನು ಶ್ಲಾಘಿಸಿದರು.