ಬೆಂಗಳೂರು: ಯಾವುದೇ ಕಾರಣಕ್ಕೂ ಗೆಲ್ಲಿಸಿದ ಮತದಾರರ ನಿರೀಕ್ಷೆಗಳನ್ನು ಹುಸಿ ಮಾಡಬೇಡಿ ಎಂದು ಕನಕಪುರ ತಾಲೂಕಿನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಗೆ ಡಿಸಿಎಂ ಅಶ್ವತ್ಥ ನಾರಾಯಣ್ ಕಿವಿಮಾತು ಹೇಳಿದರು.
ರಾಮನಗರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳ ಪೈಕಿ ಜಿದ್ದಾಜಿದ್ದಿನ ಕಣವಾಗಿದ್ದ ಕನಕಪುರದಲ್ಲಿ ಕೇಸರಿ ಬಾವುಟ ಹಾರಿಸಿದ ಬಿಜೆಪಿ ಬೆಂಬಲಿತ 52 ಗ್ರಾ.ಪಂ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು. ಡಿ.ಕೆ ಸಹೋದರರ ಪ್ರಬಲ ಪೈಪೋಟಿಯನ್ನು ಎದುರಿಸಿ ಗೆದ್ದಿದ್ದಕ್ಕೆ ಸಾರ್ಥಕ ಭಾವ ಮೂಡಿದೆ ಎಂದು ಹೇಳಿಕೊಂಡರು.
ಹೊಸದಾಗಿ ಚುನಾವಣೆಯಲ್ಲಿ ಗೆದ್ದ ಎಲ್ಲ ಸದಸ್ಯರು ಕೆಲಸ ಮಾಡುವುದನ್ನು ಕಲಿಯಬೇಕು. ಯಾವುದಕ್ಕೂ ದುಡುಕುವುದು ಬೇಡ. ನಾಲ್ಕು ಜನರ ಜತೆ ಸೇರಿ ಕೆಲಸ ಮಾಡಿ. ನಾನು ಎನ್ನುವುದು ಬೇಡ. ಪಕ್ಷದ ವರಿಷ್ಠರು ಹೇಳಿದ ಹಾಗೆ ಕೆಲಸ ಮಾಡಬೇಕು. ಯಾರೂ ಸೂಪರ್ ಮ್ಯಾನ್ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಜನ ಮೆಚ್ಚುವ ಕೆಲಸ ಮಾಡೋಣ. ಶಕ್ತಿ ಮೀರಿ ಕೆಲಸ ಮಾಡಿ. ಎಲ್ಲರೂ ಸಚಿವರನ್ನೇ ಭೇಟಿ ಮಾಡಬೇಕಿಲ್ಲ. ನಿಮ್ಮ ಶಕ್ತಿ ಕೇಂದ್ರದವರನ್ನು ಭೇಟಿ ಮಾಡಿ ಮಾಹಿತಿ ಕೊಡಿ. ಒಳ್ಳೆಯ ಕೆಲಸ ಮಾಡಿ. ನ್ಯಾಯಬದ್ಧವಾಗಿ ಕೆಲಸ ಮಾಡಿ ಉತ್ತಮ ಹೆಸರುಗಳಿಸಿ ಎಂದು ಡಾ.ಅಶ್ವತ್ಥನಾರಾಯಣ ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಸಚಿವರು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರನ್ನು ಗೌರವಿಸಿದರು. ಬಳಿಕ ಆ ಸದಸ್ಯರೆಲ್ಲರೂ ಡಿಸಿಎಂ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ರಾಮನಗರ ಜಿಲ್ಲೆಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ, ರಾಮನಗರ ಜಿಲ್ಲಾ ಬಿಜೆಪಿ ಅದ್ಯಕ್ಷ ದೇವರಾಜ್ ಇದ್ದರು.